ಮುಂಬೈ: ದೆಹಲಿಯಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ರಾಹುಲ್ ಗಾಂಧಿಯ ಬಗ್ಗೆ ಭಯವಿದೆ. ಹೀಗಾಗಿ ರಾಹುಲ್ ಅವರೇ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯುವುದು ಸೂಕ್ತ ಎಂದು ಶಿವಸೇನೆಯ ಮುಖವಾಣಿ ಪತ್ರಿಕೆ 'ಸಾಮ್ನಾ' ಸಂಪಾದಕೀಯದಲ್ಲಿ ಬರೆಯಲಾಗಿದೆ.
ಕಳೆದ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ ಗಾದಿಗೆ ಏರಲು ಮುಂದಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಮೋದಿಯವರು ಎಷ್ಟು ಮುಖ್ಯವೋ ಕಾಂಗ್ರೆಸ್ಗೆ ರಾಹುಲ್ ಗಾಂಧಿ ಕೂಡ ಅಷ್ಟೇ ಮುಖ್ಯ ಎನ್ನುವುದು ಸತ್ಯ. ರಾಹುಲ್ ಮತ್ತೆ ಅಧ್ಯಕ್ಷರಾಗಲು ಒಪ್ಪಿಗೆ ಸೂಚಿಸಿರುವ ಬೆನ್ನಲ್ಲೇ ಅವರ ಕುಟುಂಬಸ್ಥರಾದ ರಾಬರ್ಟ್ ವಾದ್ರಾ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಹತ್ತಿಕ್ಕುವ ಪ್ರಯತ್ನಗಳು ನಡೆದಿರುವುದು ಉದ್ದೇಶಪೂರ್ವಕ ಎಂಬುದು ಗೊತ್ತಾಗುತ್ತದೆ ಎಂದು ಸಾಮ್ನಾ ಗಾಂಧಿ ಕುಟುಂಬದ ಪರವಾಗಿ ಬ್ಯಾಟ್ ಬೀಸಿದೆ.
ದೇಶದ ರಾಜಕೀಯ ಬೆಳವಣಿಗೆಗಳ ಕುರಿತು 'ಸಾಮ್ನಾ' ಪತ್ರಿಕೆಯು 'ರಾಹುಲ್ ಗಾಂಧಿಯ ಭಯ' ಎಂಬ ಶೀರ್ಷಿಕೆಯಡಿ ಸಂಪಾದಕೀಯ ಪ್ರಕಟಿಸಿದೆ. ಇದರಲ್ಲಿ ಒಂದೆಡೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷ ಹೇಗೆ ದುರ್ಬಲಗೊಂಡಿತು ಎಂದು ವಿವರಿಸಿದರೆ, ಇನ್ನೊಂಡೆದೆ ಪ್ರಿಯಾಂಕಾ ಗಾಂಧಿ ಪತಿ, ರಾಬರ್ಟ್ ವಾದ್ರಾ ವಿರುದ್ಧ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯ ಅಸ್ತ್ರವನ್ನು ಉಪಯೋಗಿಸಿರುವ ಕುರಿತು ತಿಳಿಸಲಾಗಿದೆ.
"ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಬರ್ಟ್ ವಾದ್ರಾ ಮನೆ ಮೇಲೆ ದಾಳಿ ನಡೆಸಿದರು. ವಾದ್ರಾ ಬ್ರಿಟನ್ನಲ್ಲಿ ಬಹಿರಂಗಪಡಿಸದ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಆದರೆ, ಕೇಂದ್ರ ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡು ಗಾಂಧಿ ಕುಟುಂಬವನ್ನು ಹಿಂಸಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಿದ್ದಾರೆ. ಆಡಳಿತ ಪಕ್ಷದ ತಪ್ಪುಗಳನ್ನು ಬಯಲಿಗೆಳೆಯಲು ವಿರೋಧ ಪಕ್ಷದ ನಾಯಕರು ಪ್ರಬಲವಾಗಿರಬೇಕು. ಹಾಗಾಗಿ ಮತ್ತೊಮ್ಮೆ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಏರುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಲಿದ್ದಾರೆ." ಎಂದು 'ಸಾಮ್ನಾ' ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.
"ರಾಹುಲ್ ಗಾಂಧಿ ಓರ್ವ ದುರ್ಬಲ ನಾಯಕನೆಂದು ಪ್ರತಿಪಕ್ಷಗಳು ಸತತವಾಗಿ ಆರೋಪ ಮಾಡುತ್ತಿದ್ದರೂ ರಾಹುಲ್ ಅಲ್ಲಾಡದೆ ನಿಂತಿದ್ದಾರೆ. ಆದರೆ ಸೋತ ವಿರೋಧ ಪಕ್ಷಗಳು ಫಿನಿಕ್ಸ್ ಹಕ್ಕಿಯಂತೆ ಮತ್ತೆ ಮೇಲೆದ್ದು ಬರುವುದು ಭಾರತದಲ್ಲಿ ಹೊಸದೇನಲ್ಲ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರಿಗೆ ರಾಹುಲ್ ಭಯ ಕಾಡುತ್ತಿರುವುದರಿಂದಲೇ ಸರ್ಕಾರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಗಾಂಧಿ ಪರಿವಾರದ ಹೆಸರು ಕೆಡಿಸಲಾಗುತ್ತಿದೆ. ಎದುರಾಳಿ ಒಬ್ಬಂಟಿಯಾಗಿದ್ದರೂ ಆತ ಪ್ರಾಮಾಣಿಕನಾಗಿದ್ದರೆ ಆಡಳಿತಗಾರರಲ್ಲಿ ನೂರು ಪಟ್ಟು ಹೆಚ್ಚಿನ ಭಯ ಹುಟ್ಟುತ್ತದೆ. ಅದೇ ರೀತಿ ಕೇಂದ್ರ ಸರ್ಕಾರಕ್ಕೆ ರಾಹುಲ್ ಅವರ ಭಯ ನೂರು ಪಟ್ಟು ಹೆಚ್ಚಾಗಿದೆ." ಎಂದು ಸಾಮ್ನಾ ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡಿದೆ.
ಒಟ್ಟಾರೆಯಾಗಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಎದುರಿಸಲು ರಾಹುಲ್ ಗಾಂಧಿಯೇ ಸೂಕ್ತ ವ್ಯಕ್ತಿ ಎಂದು ಶಿವಸೇನೆಯು 'ಸಾಮ್ನಾ' ಸಂಪಾದಕೀಯದ ಮೂಲಕ ಪರೋಕ್ಷವಾಗಿ ಹೇಳಿದೆ.