ನವದೆಹಲಿ: ಕೋವಿಡ್ ಲಸಿಕೆ ಸ್ಪುಟ್ನಿಕ್-ವಿ ಉತ್ಪಾದನೆಯಲ್ಲಿ ಭಾರತದ ಜೊತೆ ಸಹಭಾಗಿತ್ವಕ್ಕಾಗಿ ರಷ್ಯಾ ಕಾಯುತ್ತಿದೆ ಎಂದು ರಷ್ಯಾದ ಡೈರೆಕ್ಟ್ ಇನ್ವೆಸ್ಟಮೆಂಟ್ ಫಂಡ್ ಸಿಇಒ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಸಿಕೆ ಉತ್ಪಾದಿಸಲು ಲ್ಯಾಟಿನ ಅಮೆರಿಕ, ಏಷ್ಯಾ ಹಾಗೂ ಮಧ್ಯ ಪೂರ್ವ ದೇಶಗಳು ಮುಂದೆ ಬಂದಿವೆ. ಲಸಿಕೆ ಉತ್ಪಾದನೆ ಬಹುಮುಖ್ಯ ವಿಷಯ. ಆದ್ದರಿಂದ ಸದ್ಯ ನಾವು ಉತ್ಪಾದನೆಯಲ್ಲಿ ಭಾರತದ ಸಹಭಾಗಿತ್ವಕ್ಕಾಗಿ ಎದುರು ನೋಡುತ್ತಿದ್ದೇವೆ. ಲಸಿಕೆ ಉತ್ಪಾದಿಸಲು ಭಾರತ ಸಮರ್ಥವಾಗಿದೆ ಎಂದು ಅವರು ಹೇಳಿದ್ದಾರೆ.
ರಷ್ಯಾದಲ್ಲಿ ಮಾತ್ರ ಲಸಿಕೆಯ ಕ್ಲಿನಿಕ್ ಟ್ರಯಲ್ ಮಾಡಲ್ಲ. ಯುಎಇ, ಭಾರತ, ಬ್ರೆಜಿಲ್ನಲ್ಲೂ ಟ್ರಯಲ್ ಮಾಡುತ್ತೇವೆ. ಲಸಿಕೆಗೆ ಭಾರಿ ಬೇಡಿಕೆ ಇರುವುದರಿಂದ ಕನಿಷ್ಠ ಐದು ದೇಶಗಳಲ್ಲಿ ಉತ್ಪಾದನೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
ಕೊರೊನಾಗೆ ಲಸಿಕೆ ಕಂಡು ಹಿಡಿದಿರುವುದಾಗಿ ರಷ್ಯಾ ಘೋಷಿಸಿದ್ದು, ಇದು ಮೊದಲ ಲಸಿಕೆ ಎನ್ನಲಾಗುತ್ತಿದೆ. ಆದ್ರೆ ಲಸಿಕೆಯ ಎರಡು ಟ್ರಯಲ್ ಮಾತ್ರ ಆಗಿರುವುದರಿಂದ ಮೂರನೇ ಟ್ರಯಲ್ ಬಾಕಿ ಇರುವಾಗಲೇ ಉತ್ಪಾದನೆ ಆರಂಭಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಷ್ಯಾದಲ್ಲೇ ಲಸಿಕೆ ವಿರುದ್ಧ ಮಾತುಗಳು ಕೇಳಿಬಂದಿವೆ.