ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಕಳೆದ ಮೂರು ದಿನಗಳಿಂದ ದೆಹಲಿ ಹೊತ್ತಿ ಉರಿಯುತ್ತಿದೆ.
ಈಶಾನ್ಯ ದೆಹಲಿಯ ದಯಾಳಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ನಿಯಂತ್ರಣ ಮಾಡಲು ತೆರಳಿದ್ದ ಪೊಲೀಸ್ ಪೇದೆ ರತನ್ ಲಾಲ್(42) ಸಾವನ್ನಪ್ಪಿದ್ದು, ಇದೀಗ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ದೆಹಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದು, ಕುಟುಂಬದ ಜವಾಬ್ದಾರಿ ಹೊತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ದೆಹಲಿ ಜನತೆ ಈ ರೀತಿ ಹಿಂಸಾಚಾರ ನಡೆಯಲು ಇಷ್ಟಪಡಲ್ಲ. ಆದರೆ, ಕೆಲ ಸಮಾಜ ವಿರೋಧಿ ಹಾಗೂ ರಾಜಕೀಯ ಶಕ್ತಿಗಳು ಇದರ ಹಿಂದಿವೆ ಎಂದು ಹೇಳಿದ್ದಾರೆ.
1ಕೋಟಿ ರೂ ನೀಡುವುದಾಗಿ ನಡ್ಡಾ ಘೋಷಣೆ: ಗಲಭೆ ವೇಳೆ ಮೃತಪಟ್ಟಿರುವ ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಕುಟುಂಬದವರಿಗೆ 1 ಕೋಟಿ ರೂ ಪರಿಹಾರ ನೀಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಹ ಘೋಷಣೆ ಮಾಡಿದ್ದು, ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸದ ಆಶ್ವಾಸನೆ ನೀಡಿದ್ದಾರೆ. ಸೋಮವಾರ ನಡೆಯುತ್ತಿದ್ದ ಗಲಭೆ ವೇಳೆ ಕಲ್ಲೇಟಿನಿಂದ ರತನ್ ಲಾಲ್ ಸಾವನ್ನಪ್ಪಿದ್ದರು. ಈ ನಡುವೆ, ಪ್ರಚೋದನಕಾರಿ ಭಾಷಣ ಮಾಡಿ ಗಲಭೆ ಉದ್ಭವವಾಗಲು ಕುಮ್ಮಕ್ಕು ನೀಡುವವರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.