ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ಜರ್ನಲಿಸಂ ಕೋರ್ಸ್‌ನ ಪಠ್ಯಕ್ರಮದಲ್ಲಿ ಆರ್‌ಎಸ್‌ಎಸ್ ಅನ್ನು ಕೆಟ್ಟದಾಗಿ ಬಿಂಬಿಸುವ ಅಧ್ಯಾಯಗಳನ್ನು ಅಳವಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ದೆಹಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರೊಬ್ಬರು ಇಂಗ್ಲಿಷ್ ಜರ್ನಲಿಸಂ ಕೋರ್ಸ್‌ನ ನವೀಕರಿಸಿದ ಪಠ್ಯಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೂ ಇದು ಆರ್‌ಎಸ್‌ಎಸ್ ಮತ್ತು ಅದರ ಸಿದ್ಧಾಂತವನ್ನು 'ಕೆಟ್ಟ ರೀತಿಯಲ್ಲಿ' ಚಿತ್ರಿಸುತ್ತದೆ ಎಂದು ಆರೋಪಿಸಿದ್ದಾರೆ. ಇಂಗ್ಲಿಷ್ ಜರ್ನಲಿಸಂ ಕೋರ್ಸ್‌ನ ನವೀಕರಿಸಿದ ಪಠ್ಯಕ್ರಮದಲ್ಲಿ ಮುಜಾಫರ್‌ನಗರ ಗಲಭೆಯನ್ನು ಉಲ್ಲೇಖಿಸಿದ್ದು, ಇದಕ್ಕೆ ಆರೆಸ್ಸೆಸ್ ಹಾಗೂ ಅದರ ಅಂಗಸಂಸ್ಥೆಗಳು ಕುಮ್ಮಕ್ಕು ನೀಡಿದ್ದವು ಎಂದು ಪಠ್ಯದಲ್ಲೇ ಆರೋಪಿಸಲಾಗಿದೆ. ದೇಶದಲ್ಲಿ ನಡೆದ ಗುಂಪು ಹತ್ಯೆಗಳನ್ನೂ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಪಠ್ಯಕ್ರಮದ ತಯಾರಿಕೆಯಲ್ಲಿ ಭಾಗಿಯಾಗಿರುವ ಪ್ರಾಧ್ಯಾಪಕರು, ಈ ಆರೋಪವನ್ನು ತಳ್ಳಿ ಹಾಕಿದ್ದು, ಸೂಕ್ಷ್ಮ ವಿಷಯಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೇಗೆ ಗ್ರಹಿಸಬೇಕು ಎಂಬುದನ್ನು ಕಲಿಸಲು ಈ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.