ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಹವಾಮಾನ ಪರಿಸ್ಥಿತಿಗಳು ಇಂದು ಮನುಷ್ಯನ ನಿಯಂತ್ರಣಕ್ಕೆ ಸಿಗದಂತಾಗಿದೆ. ಏರುತ್ತಿರುವ ಬಿಸಿಯು ಪ್ರಪಂಚದಾದ್ಯಂತ ತೀವ್ರ ಪರಿಣಾಮ ಬೀರುವ ಮಾರಕ ವಿಪತ್ತುಗಳಿಗೆ ಕಾರಣವಾಗುತ್ತಿವೆ. ಡಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೋರಿದ ಉದ್ದೇಶಪೂರ್ವಕ ಅಸಡ್ಡೆಯು ಪರಿಸರದ ಕುರಿತು ಅವರಿಗಿರುವ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಅವರು ಹವಾಮಾನ ಬದಲಾವಣೆಯ ಕುರಿತಾದ ಭವಿಷ್ಯವಾಣಿಯನ್ನು ಮತ್ತು ಒಂದು ಟ್ರಿಲಿಯನ್ ಮರಗಳನ್ನು ನೆಡಲು, ಪುನಃಸ್ಥಾಪಿಸಲು ಮತ್ತು ಸಂರಕ್ಷಿಸಲು ಅಮೆರಿಕ ಒಂದು ಉಪಕ್ರಮವನ್ನು ತೆಗೆದುಕೊಳ್ಳುವುದನ್ನು ತಳ್ಳಿಹಾಕಿದ್ದಾರೆ.
ಯುವ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಪರಿಸರ ಬದಲಾವಣೆಗಳ ಬಗ್ಗೆ ಎಚ್ಚರಿಕೆ ನೀಡಿದ ನಂತರ, ವಾಸ್ತವಿಕ ಕಾರ್ಯಯೋಜನೆಯನ್ನು ರೂಪಿಸುವ ಜವಾಬ್ದಾರಿಯನ್ನು ವಿಶ್ವ ನಾಯಕರು ಹೊಂದಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ವಿಶ್ವದ ಮುಂಚೂಣಿ ನಾಯಕರ ನಿರ್ಲಕ್ಷ್ಯದ ಬಗ್ಗೆ ಯುವ ಪೀಳಿಗೆಗಳು ಆಕ್ರೋಶ ವ್ಯಕ್ತಪಡಿಸಿದರೂ ಕೂಡ, ವಿಶ್ವದ ಅಗ್ರ ರಾಷ್ಟ್ರಗಳು ಮಾತ್ರ ಪರಿಸರ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಗಮನ ಹರಿಸದಿರುವುದು ದುರಂತ. ಜಾಗತಿಕ ತಾಪಮಾನ ಏರಿಕೆಯ ವಿರುದ್ಧದ ಸಾಮೂಹಿಕ ಯುದ್ಧದಲ್ಲಿ ಯಾವುದೇ ಪಾತ್ರವನ್ನು ವಹಿಸುವ ಅಗತ್ಯವಿಲ್ಲ ಎಂಬ ಅಮೆರಿಕದ ನಿಲುವು ನಿಜಕ್ಕೂ ಆಘಾತಕಾರಿಯಾಗಿದೆ.
ಈ ಹಿಂದೆ, ಅಮೆರಿಕ ಕ್ಯೋಟೋ ಒಪ್ಪಂದದಿಂದ ಹೊರಗುಳಿದಿತ್ತು. ಪ್ಯಾರಿಸ್ ಒಪ್ಪಂದಕ್ಕೆ ಒಬಾಮಾ ಸರ್ಕಾರ ಸಹಿ ಹಾಕಿದ್ದರೂ, ಟ್ರಂಪ್ ಅವರು ದೇಶದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಆ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದರು. ತನ್ನ ಸ್ವಂತ ನಾಗರಿಕರ ಪ್ರತಿಭಟನೆಯ ಹೊರತಾಗಿಯೂ, ಅವರು ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವ ತೀರ್ಮಾನ ತೆಗೆದುಕೊಂಡರು. ಕೆನಡಾ, ರಷ್ಯಾ ಮತ್ತು ಬ್ರೆಜಿಲ್ಗೆ ಹೋಲಿಸಿದರೆ ಅಮೆರಿಕದಲ್ಲಿ ಮರಗಳ ಸಂಖ್ಯೆ ಕಡಿಮೆ ಇದೆ. ಡಬ್ಲ್ಯುಇಎಫ್ನ ಹಸಿರು ಉಪಕ್ರಮವನ್ನು ಬೆಂಬಲಿಸುವ ಮೂಲಕ ಕೇವಲ ಕಣ್ಣೀರು ಒರೆಸುವ ತಂತ್ರವನ್ನು ಅಮೆರಿಕ ಹೊಂದಿದಂತೆ ಕಾಣುತ್ತದೆ.
ಹವಾಮಾನ ಪರಿಸ್ಥಿತಿಗಳಲ್ಲಿ ಆಕಸ್ಮಿಕವಾಗಿ ಏರುಪೇರಾಗುತ್ತಿರಲು ಮುಖ್ಯ ಕಾರಣ ಸಮರ್ಥನೀಯವಲ್ಲದ, ಸರಿಯಾದ ಆಲೋಚನೆ ಇಲ್ಲದ ಅಭಿವೃದ್ಧಿ ಯೋಜನೆಗಳು, ಅಜಾಗರೂಕ ಕೈಗಾರಿಕೀಕರಣ ಮತ್ತು ಪಳೆಯುಳಿಕೆ ಇಂಧನ ಸುಡುವಿಕೆಯಿಂದ ಹೆಚ್ಚುತ್ತಿರುವ ಇಂಗಾಲದ ಹೊರಸೂಸುವಿಕೆ. ವಿಶ್ವಾದ್ಯಂತ ತಾಪಮಾನವು ಸ್ಥಿರವಾಗಿ ಏರುತ್ತಿದ್ದು, ಮಾಲಿನ್ಯ, ಸಾಂಕ್ರಾಮಿಕ ರೋಗಗಳು, ಆಹಾರದ ಕೊರತೆ ಮತ್ತು ವಿಪತ್ತುಗಳಿಗೆ ಕಾರಣವಾಗಿದೆ. ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ಚೀನಾ ಮತ್ತು ಅಮೆರಿಕ 40 ಪ್ರತಿಶತದಷ್ಟು ಪಾಲನ್ನು ಹೊಂದಿವೆ.
ಭಾರತವು ಇಂಗಾಲ ಹೊರಸೂಸುವಿಕೆ ನಿಯಂತ್ರಣದಲ್ಲಿ ಉತ್ತಮ ಹೆಜ್ಜೆಗುರುತನ್ನು ಹೊಂದಿದ್ದರೂ (ಶೇಕಡಾ 4.5), ನಾವು ಎಂದಿಗೂ ಸ್ವಯಂ ನಿಯಂತ್ರಣದಿಂದ ದೂರ ಸರಿಯಲಿಲ್ಲ. ಜಗತ್ತನ್ನು ಅಕ್ಷರಶಃ ಬೆಂಕಿಯಿಂದ ಸುಡುತ್ತಿರುವ ರಾಷ್ಟ್ರಗಳು ಇದಕ್ಕೆ ಕಾರಣವಾಗಿರುವ ತಮ್ಮ ಚಟುವಟಿಕೆಗಳ ಬಗ್ಗೆ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ. ವಿಶ್ವದ ರಾಷ್ಟ್ರಗಳು ಪ್ರತಿವರ್ಷ 10,000 ಕೋಟಿ ಟನ್ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುತ್ತಿವೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಮುಂದಿನ ಮೂರು ದಶಕಗಳಲ್ಲಿ ಈ ಸಂಖ್ಯೆ 18,400 ಕೋಟಿ ಟನ್‌ಗಳಿಗೆ ಹೆಚ್ಚಾಗಬಹುದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ತಲಾ ಸಂಪನ್ಮೂಲ ಬಳಕೆ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಅದೇ ಸಮೀಕ್ಷೆ ವರದಿ ಮಾಡಿದೆ. ನೈಟ್ರಸ್ ಆಕ್ಸೈಡ್ನಂತಹ ಕೈಗಾರಿಕಾ ಹೊರಸೂಸುವಿಕೆಯು 100 ವರ್ಷಗಳಿಂದ ಪರಿಸರವನ್ನು ಹಾನಿಗೊಳಿಸುತ್ತಿದೆ.
ನೈಟ್ರಸ್ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ, ಚೀನಾ ಮತ್ತು ಯೂರೋಪ್ ಒಕ್ಕೂಟಗಳು ಇದರ ನಿಯಂತ್ರಣದಲ್ಲಿ ತಮ್ಮ ಹೆಜ್ಜೆ ಗುರುತನ್ನು ತೋರಿಸುವಲ್ಲಿ ಬೇಜವಾಬ್ದಾರಿಯುತವಾಗಿವೆ. ಡಬ್ಲ್ಯುಇಎಫ್‌ನಲ್ಲಿ ಹವಾಮಾನ ಕಾಳಜಿ ಮುನ್ಸೂಚನೆಗಳು ಕೇವಲ ಕಪೋಕಲ್ಪಿತ ಎಂದು ಟ್ರಂಪ್ ಹೇಳುವ ಮೂಲಕ ಅಮೆರಿಕ ಹವಾಮಾನದ ಕುರಿತು ತನ್ನ ಪೂರ್ತಿ ಅಸಡ್ಡೆಯ ಪ್ರದರ್ಶನ ಮಾಡಿದೆ. ಹವಾಮಾನ ಬದಲಾವಣೆಯನ್ನು ಕ್ಷುಲ್ಲಕವೆಂದು ಭಾವಿಸುವ ವಿಶ್ವ ನಾಯಕರ ಹತಾಶ ವರ್ತನೆಯ ಹೊರತಾಗಿಯೂ, ಘಟಿಸುತ್ತಿರುವ ಹವಾಮಾನ ದುರಂತಗಳು ತಾವಾಗಿಯೇ ಮನುಕುಲಕ್ಕೆ ಎಚ್ಚರಿಕೆ ಕರೆ ನೀಡುತ್ತಿವೆ.
ಸಹಾರಾ ಮರುಭೂಮಿಯಲ್ಲಿ ಹಿಮಪಾತ, ಪರಿಸರವನ್ನು ನಿರ್ಲಕ್ಷಿಸುವ ಅಮೆರಿಕದಲ್ಲಿ -40 ಡಿಗ್ರಿ ಸೆಲ್ಸಿಯಸ್ ತಾಪಮಾನ, ಹೆಚ್ಚಿನ ಪ್ರವಾಹ, ಚಂಡಮಾರುತಗಳು, ಭೂಕಂಪಗಳು, ಅಗ್ನಿ ಅವಘಢಗಳು ಮತ್ತು ಅಕಾಲಿಕ ಮಳೆ ಜಾಗತಿಕ ತಾಪಮಾನ ಏರಿಕೆಗೆ ಸಾಕ್ಷಿಯಾಗಿದೆ. ಸಮುದ್ರ ತೀರಗಳು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನರು ಹಿಮನದಿಗಳನ್ನು ಕರಗುವಿಕೆ ಮತ್ತು ಸಮುದ್ರದ ನೀರಿನ ಮಟ್ಟದ ಹೆಚ್ಚಳದಿಂದ ಪ್ರತಿನಿತ್ಯ ಅಪಾಯ ಎದುರಿಸುತ್ತಾರೆ. ಪರಿಸರ ತಜ್ಞರು ಈ ಘರ್ಷಣೆಗಳು ಒಂದು ರೂಢಿಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಅಮೆರಿಕ, ದಕ್ಷಿಣ ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಆಸ್ಟ್ರೇಲಿಯಾದಾದ್ಯಂತದ 15 ತೀವ್ರ ದುರಂತಗಳು ಹವಾಮಾನ ಬದಲಾವಣೆಗೆ ಹಿಡಿದ ಕನ್ನಡಿಯಾಗಿವೆ. ಆಸ್ಟ್ರೇಲಿಯಾದ ಬುಷ್ ಕಾಡುಗಳಿಗಿಂತ ಭಿನ್ನವಾಗಿರುವ ಅಮೆಜಾನ್ ಮಳೆಕಾಡುಗಳು ವಿನಾಶಕಾರಿ ಕಾಡ್ಗಿಚ್ಚುಗಳಿಗೆ ಒಳಗಾಗಿದ್ದವು. ಜಾಗತಿಕ ತಾಪಮಾನ ಏರಿಕೆಯ ಪ್ರಸ್ತುತ ಪ್ರವೃತ್ತಿ ಮುಂದುವರಿದರೆ ಬೆಳೆ ಇಳುವರಿಯಲ್ಲಿ ತೀವ್ರ ಕುಸಿತದ ಜೊತೆಗೆ ನೆಲಗಡಲೆ, ಬಾಳೆಹಣ್ಣು, ಕಾಫಿ ಮತ್ತು ಆಲೂಗಡ್ಡೆಯಂತಹ ಹಲವಾರು ಜಾತಿಯ ಸಸ್ಯವರ್ಗಗಳು ಅಳಿವಿನಂಚಿನಿಗೆ ಹೋಗಲಿವೆ ಎಂದು ಲ್ಯಾನ್ಸೆಟ್ ಸಂಶೋಧನೆ ಹೇಳಿದೆ.
ಈ ಎಚ್ಚರಿಕೆಯ ಘಂಟೆಗಳ ಹೊರತಾಗಿಯೂ, ಇತ್ತೀಚಿನ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ ಸಿಒಪಿ 25ರಲ್ಲಿ ಇದರ ನಿಯಂತ್ರಣಕ್ಕೆ ಯಾವುದೇ ಕಾರ್ಯಸಾಧ್ಯವಾದ ಪರಿಹಾರ ಅಥವಾ ಒಪ್ಪಂದವಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಬದಲಾವಣೆಯ ವಿರುದ್ಧ ಜಂಟಿ ಯುದ್ಧದತ್ತ ಹೆಜ್ಜೆ ಇಡದಿದ್ದರೆ, ಮಾನವ ನಾಗರಿಕತೆಯ ಭವಿಷ್ಯವೇ ಅನುಮಾನಾಸ್ಪದವಾಗಿರಲಿದೆ ಎಂಬುದನ್ನು ಮರೆಯಬಾರದು. ಪ್ರಕೃತಿ ಉಳಿದರೆ ಮಾತ್ರ ನಾವು ಎಂಬುದನ್ನು ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಹಾಳು ಮಾಡುತ್ತಿರುವ ವಿಶ್ವದ ಮುಂದುವರಿದ ರಾಷ್ಟ್ರಗಳು ನೆನಪಿನಲ್ಲಿಡಬೇಕು.