ಲಖನೌ: ಉತ್ತರಪ್ರದೇಶದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆದ್ದು ತೀವ್ರ ಮುಖಭಂಗ ಅನುಭವಿಸಿತು. ಇದೀಗ ಸೋಲಿನ ಪರಾಮರ್ಶೆ ಮಾಡಲು ಪ್ರಿಯಾಂಕಾ ಗಾಂಧಿ ಇಂದು ಪ್ರಯಾಗ್ರಾಜ್ಗೆ ಭೇಟಿ ನೀಡಲಿದ್ದಾರೆ.
ಕಾಂಗ್ರೆಸ್ಸಿನ ವರ್ಚಸ್ವಿ ನಾಯಕಿ ಎಂದು ಕರೆಸಿಕೊಂಡಿದ್ದ ಪ್ರಿಯಾಂಕಾರನ್ನು ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಆದರೂ ರಾಯ್ಬರೇಲಿಯಲ್ಲಿ ಸೋನಿಯಾಗಾಂಧಿ ಗೆಲುವು ಬಿಟ್ಟರೆ ಕಾಂಗ್ರೆಸ್‌ಗೆ ಮತ್ಯಾವ ಸ್ಥಾನಗಳೂ ದೊರೆಯಲಿಲ್ಲ. ಇಂತಹ ಹೀನಾಯ ಸೋಲು ಏಕಾಯ್ತು? ಎಂಬ ಬಗ್ಗೆಯೇ ಪ್ರಿಯಾಂಕಾ ಇಂದು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಕಳೆದ ಶನಿವಾರ ಪೂರ್ವಾಂಚಲದ 40 ಅಭ್ಯರ್ಥಿಗಳೊಂದಿಗೆ ಪ್ರಿಯಾಂಕಾ ಸಭೆ ನಡೆಸಿದ್ದರು. ಎಲ್ಲ ರೀತಿಯಲ್ಲೂ ಪರಾಮರ್ಶೆ ನಡೆಸುತ್ತಿರುವ ಅವರು, ಉತ್ತರ ಪ್ರದೇಶದ ಕಾಂಗ್ರೆಸ್ನಲ್ಲಿ ಸಾಕಷ್ಟು ಬದಲಾವಣೆ ತರುವ ಸಾಧ್ಯತೆ ಇದೆ.
2020ರಲ್ಲಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ನಲ್ಲಿ ಅಗತ್ಯ ತಯಾರಿ ಆಗಲೇಬೇಕಿದೆ. ಈ ಕಾರಣ ಇಂದಿನ ಭೇಟಿಯಲ್ಲಿ ಪ್ರಿಯಾಂಕಾ 40 ಜಿಲ್ಲೆಗಳ ಪಕ್ಷದ ಮುಖ್ಯಸ್ಥರನ್ನು ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ. ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಿ ಉತ್ತಮ ಸಂಘಟನೆ ಮಾಡಬೇಕಾದ ಜವಾಬ್ದಾರಿಯೂ ಪ್ರಿಯಾಂಕಾರ ಹೆಗಲ ಮೇಲಿದೆ.