ಜೈಪುರ(ರಾಜಸ್ಥಾನ): ಡಿಸೆಂಬರ್ 26, 2019 ರಂದು ಕೊನೆಯ ಸೂರ್ಯಗ್ರಹಣದ ನಂತರ, ಒಂದಿಷ್ಟು ಮಕ್ಕಳು ಬರಿಗಣ್ಣಿನಿಂದ ಗ್ರಹಣ ವೀಕ್ಷಿಸಿದ್ದು, ಕಣ್ಣುಗಳು ಹಾಳಾದ ಕೆಲವು ಪ್ರಕರಣಗಳು ದಾಖಲಾಗಿವೆ.
ಸೂರ್ಯಗ್ರಹಣ ಸಂಭವಿಸಿದಾಗ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂದು ಹಲವು ಬಾರಿ ಎಚ್ಚರಿಸಲಾಗುತ್ತದೆ, ಏಕೆಂದರೆ ಬರಿಗಳ್ಳಿನಿಂದ ಗ್ರಹಣ ವೀಕ್ಷಿಸಿದಲ್ಲಿ ಕಣ್ಣುಗಳು ಹಾಳಾಗುವ ಅಪಾಯವಿರುತ್ತದೆ. ಆದರೆ, ಇತ್ತೀಚೆಗೆ ಸೂರ್ಯಗ್ರಹಣದ ನಂತರ ಕಣ್ಣಿಗೆ ಹಾನಿಯಾದ ಕೆಲವು ಪ್ರಕರಣಗಳು ವರದಿಯಾಗಿವೆ. ವಿಶೇಷವಾಗಿ ಚಿಕ್ಕ ಮಕ್ಕಳ ಕಣ್ಣುಗಳು 40 ಪ್ರತಿಶತಕ್ಕಿಂತಲೂ ಹೆಚ್ಚು ದೋಷಯುಕ್ತವಾಗಿವೆ. ಜೊತೆಗೆ 2 ಮಕ್ಕಳ ರೆಟಿನಾಗೆ ಶೇ 70 ವರೆಗೆ ಹಾನಿಯಾಗಿದೆ ಎಂದು ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ಕಣ್ಣಿನ ವಿಭಾಗದ ಹೆಚ್‌ಒಡಿ ಡಾ. ಕಮಲೇಶ್ ಖಿಲ್ನಾನಿ ಮಾಹಿತಿ ನೀಡಿದ್ದಾರೆ.
ಇಂತಹ ಪ್ರಕರಣಗಳು ಎದುರಾದಾಗ ವೈದ್ಯ ಲೋಕಕ್ಕೂ ಇದು ಆಶ್ಚರ್ಯವಾಗುವಂತದ್ದು. ಏಕೆಂದರೆ ಇದಕ್ಕೂ ಮುನ್ನ ಅನೇಕ ಬಾರಿ ಸೂರ್ಯಗ್ರಹಣ ಸಂಭವಿಸಿದೆ. ಆದರೆ, ಇಂತಹ ದುರಂತ ಪ್ರಕರಣಗಳು ನಡೆದಿರಲಿಲ್ಲ. ಆದರೆ, ಡಿಸೆಂಬರ್ 26 ರಂದು ಸೂರ್ಯಗ್ರಹಣವಾದ ನಂತರವೇ ಕೆಲವು ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬಂದಿದೆ ಎಂದು ವೈದ್ಯ ಕಮಲೇಶ್ ಖಿಲ್ನಾನಿ ಹೇಳಿದ್ದಾರೆ.
2019ರ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 26ರಂದು ಬೆಳಗ್ಗೆ 7.59 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 01.35 ಕ್ಕೆ ಕೊನೆಗೊಂಡಿತು. ಅದು ಕೂಡ 5 ಗಂಟೆ 36 ನಿಮಿಷಗಳವರೆಗೆ ಗ್ರಹಣದ ಅವಧಿ ಇತ್ತು. ಈ ಸಮಯದಲ್ಲಿ, ಕೆಲವು ಮಕ್ಕಳು ಕನ್ನಡಕ ಅಥವಾ ಭದ್ರತಾ ವ್ಯವಸ್ಥೆಗಳಿಲ್ಲದೇ ಸೂರ್ಯಗ್ರಹಣವನ್ನು ನೋಡಿದ್ದಾರೆ. ಪ್ರಸ್ತುತ, ನೇತ್ರಶಾಸ್ತ್ರಜ್ಞರು ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದಾರೆ.