ಮುಂಬೈ: ಮೊನ್ನೆಯವರೆಗೂ ಇದ್ದ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಎಂಬ ಕಲ್ಪನೆ ನಿನ್ನೆ ಬೆಳಗಾಗುವಷ್ಟರಲ್ಲಿ ಬಿಜೆಪಿ-ಎನ್ಸಿಪಿಯಾಗಿ ಬದಲಾಗಿತ್ತು. ಮಹಾರಾಷ್ಟ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಎಲ್ಲಾ ಪಕ್ಷಗಳು ರೆಸಾರ್ಟ್ ರಾಜಕಾರಣ ನಡೆಸಿವೆ.
ಶನಿವಾರ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಹಾರಾಷ್ಟ್ರದ ಬಿಜೆಪಿ ನಾಯಕರು ರೆಸಾರ್ಟ್ ಕಡೆ ಮುಖ ಮಾಡಿದ್ದರು. ನಿನ್ನೆ ಸಂಜೆ ಶಿವಸೇನೆಯ ಶಾಸಕರು ಮುಂಬೈನ ಲಲಿತ ಹೋಟೆಲ್ಗೆ ತೆರಳಿದ್ದರೆ, ಎನ್ಸಿಪಿ ಶಾಸಕರು ಮುಂಬೈನ ರಿನೇಸಾನ್ಸ್ ಹೋಟೆಲ್ಗೆ ತೆರಳಿದ್ದರು. ಕಾಂಗ್ರೆಸ್ ಶಾಸಕರನ್ನ ನಿನ್ನೆ ಮಧ್ಯಪ್ರದೇಶದ ಭೋಪಾಲ್ಗೆ ಕರೆದುಕೊಂಡು ಹೋಗಲಾಗಿತ್ತು. ಇದೀಗ ಅವರೆಲ್ಲ ಅಂಧೇರಿಯ JW ಮ್ಯಾರಿಯಟ್ ಹೋಟೆಲ್ಗೆ ಶಿಫ್ಟ್ ಆಗಿದ್ದಾರೆ.
ಒಂದೆಡೆ ಬಿಜೆಪಿ ನಾಯಕರು ಬಹುಮತ ಸಾಬೀತೀಗೆ ಎನ್ಸಿಪಿ ಶಾಸಕರ ಬೆಂಬಲವಿದೆ ಎಂದು ಹೇಳುತ್ತಿದ್ದರೆ, ಇತ್ತ ಎನ್ಸಿಪಿ ನಾಯಕರು, ನಮ್ಮ ಶಾಸಕರು ನಮ್ಮ ಬಳಿ ಇದ್ದು ಬಿಜೆಪಿ ಸರ್ಕಾರ ರಚಿಸಲು ಸಾದ್ಯವಿಲ್ಲ ಎಂದು ಹೇಳುತ್ತಿದ್ದಾರೆ. ರೆಸಾರ್ಟ್ ರಾಜಕಾರಣದಿಂದ ಮಹಾ ರಾಜಕಾರಣ ಇನ್ನೂ ಯಾವ ತಿರುವು ಪಡೆಯಲಿದೆ ಎಂಬುದೇ ಕುತೂಹಲ ಕೆರಳಿಸಿದೆ.