ನವದೆಹಲಿ: ಪತಂಜಲಿ ಆಯುರ್ವೇದಕ್ಕೆ ವಿಧಿಸಲಾಗಿದ್ದ 10 ಲಕ್ಷ ರೂ. ದಂಡ ಹಾಗೂ ಕೊರೊನಿಲ್ ಎಂಬ ಟ್ರೇಡ್‌ಮಾರ್ಕ್ ಬಳಸದಂತೆ ನೀಡಲಾಗಿದ್ದ ಆದೇಶವನ್ನು ತಡೆಹಿಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಚೆನ್ನೈ ಮೂಲದ ಸಂಸ್ಥೆಯೊಂದು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರಿದ್ದ ಪೀಠವು, ಅರ್ಜಿ ಹಿಂಪಡೆಯುವಂತೆ ಅರ್ಜಿದಾರರಿಗೆ ಸೂಚಿಸಿತು. ಸೆಪ್ಟೆಂಬರ್ 3 ರಂದು ಈ ಪ್ರಕರಣದ ವಿಚಾರಣೆ ಮದ್ರಾಸ್ ಹೈಕೋರ್ಟ್ನಲ್ಲಿ ನಡೆಯಲಿರುವುದರಿಂದ ಅಲ್ಲಿಯೇ ಅರ್ಜಿ ಸಲ್ಲಿಸಲು ದೂರುದಾರರಿಗೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಪತಂಜಲಿ ಮತ್ತು ದಿವ್ಯಾ ಯೋಗ ಮಂದಿರ ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಹೈಕೋರ್ಟ್ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೊರೊನಿಲ್ 1993 ರಿಂದ ತಮ್ಮ ಒಡೆತನದ ಟ್ರೇಡ್‌ಮಾರ್ಕ್ ಉತ್ಪನ್ನವಾಗಿದೆ. ಕೊರೊನಿಲ್ ಇದು ತಮ್ಮ ಕಂಪನಿಯಿಂದ ತಯಾರಿಸಲ್ಪಡುವ ಯಂತ್ರೋಪಕರಣ ಮತ್ತು ಕೈಗಾರಿಕಾ ವಲಯದಲ್ಲಿ ಬಳಸುವ ಸ್ವಚ್ಛತಾ ಕೆಮಿಕಲ್ ಆಗಿದೆ ಎಂದು ಹೇಳಿಕೊಂಡ ಕಂಪನಿಯೊಂದು ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಏಕ ನ್ಯಾಯಾಧೀಶರ ಹೈಕೋರ್ಟ್ ಪೀಠ ಪತಂಜಲಿ ಸಂಸ್ಥೆಗೆ ದಂಡ ವಿಧಿಸಿತ್ತು. ಆದರೆ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಆದೇಶವನ್ನು ತಡೆಹಿಡಿದಿತ್ತು.
ಚೆನ್ನೈ ಮೂಲದ ಅರುದ್ರ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್, ಪತಂಜಲಿ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿತ್ತು. ಕೊರೊನಿಲ್ -213 ಎಸ್‌ಪಿಎಲ್ ಮತ್ತು ಕೊರೊನಿಲ್ -92 ಬಿ ಗಾಗಿ ಟ್ರೇಡ್‌ಮಾರ್ಕ್ ಪಡೆದಿರುವುದಾಗಿ ಕಂಪನಿ ಹೇಳಿಕೊಂಡಿದೆ. ಅಲ್ಲದೆ 2027 ರವರೆಗೆ ಈ ಟ್ರೇಡ್‌ಮಾರ್ಕ್ ತಮ್ಮ ಬಳಿ ಇರಲಿದೆ ಎಂದು ತಿಳಿಸಿತ್ತು.