ಮುಂಬೈ: ಕೊರೊನಾ ಮಹಾರಾಷ್ಟ್ರದಲ್ಲಿ ರುದ್ರನರ್ತನವಾಡುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ದೇಶದ ಹಣಕಾಸು ರಾಜಧಾನಿಯಲ್ಲಿ ಸಾವುನೋವಿನ ಪ್ರಮಾಣವೂ ಹೆಚ್ಚುತ್ತಿದೆ. ಮಾರಕ ವೈರಾಣು ತಗುಲಿ ಪ್ರಾಣ ಬಿಟ್ಟವರ ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಮಹಾರಾಷ್ಟ್ರ ಮುನ್ಸಿಪಾಲ್ ಕಾರ್ಪೋರೇಷನ್ ಕ್ರಮ ಕೈಗೊಂಡಿದೆ. ಆಸ್ಪತ್ರೆಯಿಂದ ನೇರವಾಗಿ ಶವಾಗಾರಕ್ಕೆ ಅವರ ಮೃತದೇಹ ತೆಗೆದುಕೊಂಡು ಹೋಗಿ ಬಳಿಕ ಅಂತ್ಯಕ್ರಿಯೆ ನಡೆಸುತ್ತಿದೆ. ಸೋಂಕು ಎಲ್ಲರಿಗೂ ಹರಡುವ ಸಾಧ್ಯತೆ ಇರುವ ಕಾರಣ ಮೃತದೇಹಗಳನ್ನು ತೆಗೆದುಕೊಂಡು ಹೋಗಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾವೇ ಅಂತ್ಯಕ್ರಿಯೆ ನಡೆಸುತ್ತಿದ್ದೇವೆ ಎಂದು ಪುಣೆ ಮುನ್ಸಿಪಾಲ್ ಕಾರ್ಪೋರೇಷನ್ ತಿಳಿಸಿದೆ.
ಮಹಾರಾಷ್ಟ್ರದಲ್ಲಿ 1,018 ಸೋಂಕಿತ ಪ್ರಕರಣಗಳು ಕಂಡು ಬಂದಿವೆ. ಪುಣೆಯಲ್ಲೇ ಇಲ್ಲಿಯವರೆಗೆ 13 ಜನರು ಸಾವನ್ನಪ್ಪಿದ್ರೆ, ರಾಜ್ಯದಲ್ಲಿ ಸಾವಿನ ಸಂಖ್ಯೆ 64ಕ್ಕೆ ಏರಿದೆ.
ಸಾರ್ವಜನಿಕ ಸ್ಥಳಗಳಿಗೆ ಹೋಗಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಹೋಗುವಂತೆ ಮಹಾ ಸರ್ಕಾರ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.