ಜೈಪುರ (ರಾಜಸ್ಥಾನ): ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸೆಪ್ಟೆಂಬರ್ 7ರಂದು ತಮ್ಮ 43ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಇವರ ಹುಟ್ಟುಹಬ್ಬದ ದಿನದಂದು ರಕ್ತದಾನ ಮಾಡಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸುಮಾರು 45 ಸಾವಿರ ಮಂದಿ ರಕ್ತದಾನ ಮಾಡಿದ್ದಾರೆ.
ಇದೇ ವೇಳೆ ಜಾನುವಾರುಗಳಿಗೆ ಮೇವು ನೀಡಿ, ತೋಟಗಾರಿಕಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕರು ರಕ್ತದಾನ ಮಾಡಿದರು. ಅಷ್ಟೇ ಅಲ್ಲದೆ, ನೇತ್ರ ದಾನ ಶಿಬಿರವನ್ನೂ ಏರ್ಪಡಿಸಲಾಗಿತ್ತು. ಅಲ್ಲದೆ ಬಡವರಿಗೆ ಹಣ್ಣು-ಹಂಪಲು, ಆಹಾರ ಪದಾರ್ಥಗಳನ್ನು ನೀಡಲಾಯಿತು. ಬಡಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಕೊರೊನಾ ಹಿನ್ನೆಲೆಯಲ್ಲಿ ಜೈಪುರಕ್ಕೆ ಗುಂಪಾಗಿ ಜನರು ದೌಡಾಯಿಸದೆ, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ರಕ್ತದಾನ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಸುಮಾರು 45 ಸಾವಿರ ಮಂದಿ ರಕ್ತದಾನ ಮಾಡಿ ದಾಖಲೆ ಜೊತೆಗೆ ಮಾದರಿಯಾಗಿದ್ದಾರೆ.
ಈ ಕುರಿತು ಮಾತನಾಡಿದ ಪೈಲಟ್, "ಸೆಪ್ಟೆಂಬರ್ 7ರಂದು ನನ್ನ ಜನ್ಮದಿನ. ಆ ದಿನ ನನ್ನನ್ನು ಸ್ವಾಗತಿಸಲು ಅಥವಾ ಶುಭಾಶಯ ಕೋರಲು ಜೈಪುರದಲ್ಲಿ ಸಭೆ ಸೇರದಂತೆ ನಾನು ಎಲ್ಲರಿಗೂ ಮನವಿ ಮಾಡಿದ್ದೇನೆ. ಜನರ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ನಾವೆಲ್ಲರೂ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಬೇಕು" ಎಂದರು.
ಜಿಲ್ಲೆಗಳಿಂದ ಪಡೆದ ಮಾಹಿತಿಯ ಪ್ರಕಾರ, ಜೈಪುರ ನಗರದಲ್ಲಿ 7,222 ಯುನಿಟ್, ಝಲಾವರ್‌ನಲ್ಲಿ 6,151, ಜೈಪುರ ಗ್ರಾಮೀಣ ಪ್ರದೇಶದಲ್ಲಿ 3,453, ಸಿಕಾರ್‌ನಲ್ಲಿ 3,182 ಯುನಿಟ್, ಅಜ್ಮೀರ್‌ನಲ್ಲಿ 3,181 ಯುನಿಟ್, ಅಲ್ವಾರ್‌ನಲ್ಲಿ 2,390 ಯುನಿಟ್ ಮತ್ತು ದೌಸಾದಲ್ಲಿ 2,211 ಯುನಿಟ್ ರಕ್ತದಾನ ಮಾಡಲಾಗಿದೆ.
ರಕ್ತದಾನ ಮಾಡಿದವರಿಗೆ ಪೈಲಟ್ ವಿಡಿಯೋ ಸಂದೇಶದ ಮೂಲಕ ಧನ್ಯವಾದ ಹೇಳಿದ್ದಾರೆ. "ಕೋವಿಡ್ -19 ವೇಳೆ ರಕ್ತದಾನ ಮಾಡುವುದು ಅತ್ಯಂತ ಮಾನವೀಯ ಕಾರ್ಯ. ರಾಜಸ್ಥಾನದ ಜನರ ಬೆಂಬಲ ನನಗೆ ದೊಡ್ಡ ಶಕ್ತಿಯಾಗಿದೆ ಮತ್ತು ಆಶೀರ್ವಾದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ" ಎಂದಿದ್ದಾರೆ.