ನವದೆಹಲಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೆಸ್ಸಿಕಾ ಲಾಲ್ ಕೊಲೆ ಅಪರಾಧಿ ಮನು ಶರ್ಮಾನನ್ನು ಅವಧಿ ಪೂರ್ವ ಬಿಡುಗಡೆಗೆ ದೆಹಲಿ ಶಿಕ್ಷಾವಧಿ ಪರಿಶೀಲನಾ ಮಂಡಳಿ (ಎಸ್‌ಆರ್‌ಬಿ) ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಈ ಶಿಫಾರಸಿನ ಬಗ್ಗೆ ಅಂತಿಮ ತೀರ್ಮಾನವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತೆಗೆದುಕೊಳ್ಳಲಿದ್ದಾರೆ. ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಎಸ್‌ಆರ್‌ಬಿ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ.
"ಅಂತಿಮ ಅನುಮೋದನೆಗಾಗಿ ಮನವಿಯನ್ನು ಲೆಫ್ಟಿನೆಂಟ್ ಗವರ್ನರ್ಗೆ ಕಳುಹಿಸಲಾಗುವುದು" ಎಂದು ಮೂಲಗಳು ತಿಳಿಸಿವೆ. "ಮನು ಶರ್ಮಾ ಅವಧಿ ಪೂರ್ವ ಬಿಡುಗಡೆಗೆ ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪೂರೈಸುತ್ತಾರೆ" ಎಂದು ಅವರ ವಕೀಲ ಅಮಿತ್ ಸಾಹ್ನಿ ಹೇಳಿದ್ದಾರೆ.
ಏಪ್ರಿಲ್ 30, 1999 ರ ರಾತ್ರಿ ರೆಸ್ಟೋರೆಂಟ್ ಮಹಿಳಾ ಪರಿಚಾರಕಿಯಾಗಿದ್ದ ಜೆಸ್ಸಿಕಾ ಲಾಲ್ ಅವರು ಮದ್ಯ ನೀಡಲು ನಿರಾಕರಿಸಿದ್ದರಿಂದ ಮನು ಶರ್ಮಾ ಆಕೆಯನ್ನು ಗುಂಡಿಕ್ಕಿ ಕೊಂದಿದ್ದ.
ಏನಿದು ಅವಧಿ ಪೂರ್ವ ಬಿಡುಗಡೆ?: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯು 14 ವರ್ಷಗಳ ಸಜೆ ಪೂರೈಸಿದ ನಂತರ ಅದು ತೃಪ್ತಿಕರವಾಗಿ ಕಂಡುಬಂದಲ್ಲಿ ಶಿಕ್ಷಾವಧಿ ಪರಿಶೀಲನಾ ಮಂಡಳಿಯು ಅಪರಾಧಿಯನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲು ಶಿಫಾರಸು ಮಾಡುತ್ತದೆ.