ETV Bharat / bharat

ವಿಶೇಷ ಲೇಖನ: ಸಾಂವಿಧಾನಿಕ ಗಣರಾಜ್ಯದ ಮೌಲ್ಯಗಳನ್ನು ಎತ್ತಿಹಿಡಿಯುವ ಬಗ್ಗೆ.. - Reclaiming the values of a Constitutional Republic,

ಅತ್ಯಂತ ವಿಶೇಷವಾದ ಸಂದರ್ಭದಲ್ಲಿ ಭಾರತವು ತನ್ನ 70ನೆಯ ಸಾಂವಿಧಾನಿಕ ಗಣರಾಜ್ಯ ದಿನವನ್ನು ಆಚರಿಸುತ್ತಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ (CAA) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (NRC) ವಿರುದ್ಧದ ಸಮೂಹ ಪ್ರತಿಭಟನೆಗಳಲ್ಲಿ ಭಾರತದ ಸಂವಿಧಾನವನ್ನು ಮತ್ತೆ ಮತ್ತೆ ಸ್ಮರಿಸುತ್ತಿರುವುದನ್ನು ನೋಡಬಹುದಾಗಿದೆ.

Reclaiming the values, Reclaiming the values of a Constitutional Republic, Constitutional Republic news, ಸಾಂವಿಧಾನಿಕ ಗಣರಾಜ್ಯ, ಸಾಂವಿಧಾನಿಕ ಗಣರಾಜ್ಯದ ಮೌಲ್ಯ, ಸಾಂವಿಧಾನಿಕ ಗಣರಾಜ್ಯದ ಮೌಲ್ಯ ಸುದ್ದಿ,
ಸಾಂವಿಧಾನಿಕ ಗಣರಾಜ್ಯದ ಮೌಲ್ಯಗಳನ್ನು ಎತ್ತಿಹಿಡಿಯುವ ಬಗ್ಗೆ
author img

By

Published : Jan 23, 2020, 10:05 AM IST

ಸಾಕ್ಷಾತ್ ಸಂವಿಧಾನವೇ ಮುಂಚೂಣಿಯಲ್ಲಿ ನಿಂತು ಇಡೀ ದೇಶದ ಜನತೆಯನ್ನು ಬೃಹತ್ ಜನಾಂದೋಲನವೊಂದರಲ್ಲಿ ಒಗ್ಗೂಡಿಸುವಂತಹ ಒಂದು ವಿದ್ಯಮಾನ ನಡೆಯುತ್ತಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅಭೂತಪೂರ್ವವಾದುದು. ಕಳೆದ ಒಂದೆರಡು ತಿಂಗಳಿನಿಂದ ನಡೆಯುತ್ತಿರುವ ಈ ಪ್ರತಿಭಟನೆ, ಪ್ರದರ್ಶನಗಳಲ್ಲಿ, ಲಕ್ಷಾಂತರ ಜನತೆ ನೆರೆಯುತ್ತಿರುವ ಬೃಹತ್ ಬಹಿರಂಗ ಸಭೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು (Preamble) ಸಹಸ್ರಾರು ಜನರು ಸಾಮೂಹಿಕವಾಗಿ ಓದುವ ದೃಶ್ಯಾವಳಿಗಳನ್ನು ನಾವು ನೋಡುತ್ತಿದ್ದೇವೆ.

ಈ CAA-NRC ವಿರೋಧಿ ಚಳವಳಿಯು ಭಾರತದ ಸಂವಿಧಾನವನ್ನು ಜನಪ್ರಿಯಗೊಳಿಸುತ್ತಿರುವ ರೀತಿಯಲ್ಲಿ ಇದುವರೆಗೆ ಯಾವುದೇ ಸರ್ಕಾರವಾಗಲೀ, ನ್ಯಾಯಾಂಗವಾಗಲೀ, ಯಾವುದೇ ಶಿಕ್ಷಣ ಸಂಸ್ಥೆಯಾಗಲೀ ಜನಪ್ರಿಯಗೊಳಿಸಿಲ್ಲ ಎಂದು ಘಂಟಾಘೋಷವಾಗಿ ಹೇಳಬಹುದು. ಈ ಹೊತ್ತಿಗೆ ಈ ಚಳುವಳಿ ನೀಡುತ್ತಿರುವ ಬಹುದೊಡ್ಡ ಕೊಡುಗೆ ಇದಲ್ಲದೆ ಬೇರೇನಲ್ಲ.

ಆದರೆ ಇಲ್ಲೊಂದು ಪ್ರಶ್ನೆಯಿದೆ. ಸಂವಿಧಾನದ ಈ ಸ್ಮರಣೆ ಸೂಚಿಸುತ್ತಿರುವುದೇನು? ಇದು ಧಾರ್ಮಿಕ ಭಿನ್ನತೆಗಳನ್ನು ನೀಗಿಕೊಂಡು ಭಾರತದ ಮೇಲಿನ ವಿಶ್ವಾಸವನ್ನು ದೃಢೀಕರಿಸಲು ನಡೆಸುತ್ತಿರುವ ಒಂದು ಕಾರ್ಯತಾಂತ್ರಿಕ ನಡೆ ಮಾತ್ರವೇ? ಜಾಮಿಯಾ ಮಸೀದಿಯ ಮೆಟ್ಟಿಲುಗಳ ಮೇಲೆ ಜನಸಮೂಹದ ನಡುವೆ ನಿಂತುಕೊಂಡು ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ರಾವಣ್ ಭಾರತದ ಸಂವಿಧಾನವನ್ನು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಹಿಡಿದುಕೊಂಡು ಕಾಣಿಸಿಕೊಂಡ ಚಿತ್ರಿಕೆಯು ಇಡೀ ಚಳವಳಿಯನ್ನೇ ಸಂಕೇತಿಸಿದ್ದೇಕೆ? ಈ ಕ್ರಿಯೆಗಳು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಸಲ್ಲಿಸಿದ ಔಪಚಾರಿಕ ಗೌರವಗಳೇ? ಸಂವಿಧಾನವನ್ನು ಸ್ಮರಿಸಲಾಗುವ ಈ ಘಟನೆಗಳಲ್ಲಿ ಕಾರ್ಯತಾಂತ್ರಿಕವೆನ್ನಬಹುದಾದ ಘಟನೆಗಳೂ ಇರಬಹುದೇನೋ. ಆದರೆ ಈ ಪ್ರತಿಭಟನೆಗಳು ಮೂಲಭೂತವಾಗಿ ಅತ್ಯವಶ್ಯಕವಾದ ಸಂವಿಧಾನದ ಮೌಲ್ಯಗಳನ್ನೇ ಆಧರಿಸಿದ ಪ್ರತಿಭಟನೆಗಳು ಎಂಬುದನ್ನು ನಾವು ಗಮನಿಸಬೇಕಿದೆ.

ಈ ದಿನಗಳಲ್ಲಿ ಸಂವಿಧಾನದ ಕುರಿತ ಮಾತುಗಳು ಎಲ್ಲೆಂದರಲ್ಲಿ ಕೇಳಿ ಬರುತ್ತಿವೆ. ಸಂವಿಧಾನದ ಅಸ್ತಿತ್ವಕ್ಕೇ ಧಕ್ಕೆ ಬಂದೊದಗಿದೆ ಎಂಬ ಭಾವನೆ ಮೂಡಿರುವುದರಿಂದ ಹೀಗಾಗಿದೆ ಎನ್ನಬಹುದು. ಸಂವಿಧಾನವು ನಾಶವಾಗುತ್ತದೆ ಎಂಬ ಆತಂಕವನ್ನು ಯಾರಾದರೂ ವ್ಯಕ್ತಪಡಿಸಿದರೆ ಅದು ಔಪಚಾರಿಕ ರೂಪದಲ್ಲಲ್ಲ ಎಂಬುದನ್ನು ತಿಳಿಯಬೇಕು. ಬದಲಾಗಿ, ಬಹುರೀತಿಯ ಶಾಸನಾತ್ಮಕ ಹಾಗೂ ಸರ್ಕಾರವು ತನ್ನ ಕಾರ್ಯಾಂಗದ ಮುಖೇನ ಜಾರಿಗೊಳಿಸುವ ಕ್ರಮಗಳಿಂದ ಸಂವಿಧಾನವನ್ನು ಒಳಗೊಳಗಿನಿಂದಲೇ ಟೊಳ್ಳಾಗಿಸುತ್ತಾ ಸಂವಿಧಾನವನ್ನೇ ಮುಗಿಸಿಬಿಡಲಾಗುತ್ತಿದೆ.

ಹೀಗಾಗಿ ಸಂವಿಧಾನವನ್ನು ಎತ್ತಿಹಿಡಿಯುವುದು ಎಂದರೆ ಸಂವಿಧಾನ ಎಂಬ ದಸ್ತಾವೇಜಿನ ಕೇಂದ್ರ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿದೆ. ಭಾರತವು ಸಂವಿಧಾನಾತ್ಮಕ ಗಣರಾಜ್ಯವಾಗಿದೆಯೇ ಹೊರತು ಕೇವಲ ಚುನಾವಣಾ ಪ್ರಜಾಪ್ರಭುತ್ವವಲ್ಲ ಎಂಬುದನ್ನು ಗಟ್ಟಿಯಾಗಿ ಹೇಳುವ ಕ್ರಿಯೆ ಇದಾಗಿದೆ. ಕಳೆದ 35 ವರ್ಷಗಳಲ್ಲಿಯೇ ಯಾವ ಪಕ್ಷವೂ ಪಡೆಯದಿದ್ದ ಅಭೂತಪೂರ್ವ ವಿಜಯವನ್ನು ಪಡೆದ ಕೇವಲ ಆರು ತಿಂಗಳಲ್ಲೇ ಇಂತಹ ವ್ಯಾಪಕ ಪ್ರತಿಭಟನೆಗಳು ಇಡೀ ದೇಶದಾದ್ಯಂತ ಕಾಣಿಸಿಕೊಂಡಿರುವುದನ್ನು ನೋಡುತ್ತೇವೆ.

ಇದು ಏನನ್ನು ಸಂಕೇತಿಸುತ್ತಿದೆ ಎಂದರೆ ಸಂವಿಧಾನಾತ್ಮಕ ಗಣರಾಜ್ಯದ ಮೂಲಾಧಾರಗಳು ಕೇವಲ ಒಂದು ಬಹುಸಂಖ್ಯಾತ ತತ್ವದ ಪ್ರಜಾಪ್ರಭುತ್ವಕ್ಕಿಂತಲೂ ಭಿನ್ನವಾಗಿವೆ ಎಂಬ ಸಂದೇಶವನ್ನು ಗಟ್ಟಿಯಾಗಿ ಹೇಳುವುದೇ ಆಗಿದೆ. ಭಾರತವು ಒಂದು ಸಂವಿಧಾನಾತ್ಮಕ ಗಣರಾಜ್ಯವಾಗಿ 70 ವರ್ಷಗಳನ್ನು ಪೂರ್ಣಗೊಳಿಸಿದೆ ಎಂದರೆ ಅದರ ಅರ್ಥ ಸಂವಿಧಾನದ ಈ ಮೌಲ್ಯಗಳನ್ನು ನಾವು ಮನನ ಮಾಡಿಕೊಂಡು, ಅವುಗಳನ್ನು ಪ್ರತಿಫಲಿಸುತ್ತಾ ಪ್ರತಿಧ್ವನಿಸಬೇಕಿದೆ.

ನಮ್ಮ ಸಂವಿಧಾನದ ಪೀಠಿಕೆಯಿಂದ ನಾವು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ ಭಾರತವು ಏಕಕಾಲಲ್ಲಿ ಒಂದು ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ಎರಡೂ ಆಗಿದೆ ಎಂಬುದನ್ನು. ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ಭಾರತ ಪ್ರಭುತ್ವದ ಮುಖ್ಯಸ್ಥನಾದವನು ವಂಶಾಡಳಿತ ರಾಜಶಾಹಿ ಮುಖ್ಯಸ್ಥನಾಗಿರದೇ ಪ್ರಜೆಗಳಿಂದ ಚುನಾಯಿಸಲ್ಪಟ್ಟವನಾಗಿರುತ್ತಾನೆ ಎಂಬುದಷ್ಟೇ ಭಾರತದ ಗಣರಾಜ್ಯ ಲಕ್ಷಣವೆಂದುಕೊಳ್ಳುವುದು ತಪ್ಪು.

ಭಾರತವು ಬರೀ ಪ್ರಜಾಪ್ರಭುತ್ವವಲ್ಲ, ಅದನ್ನೂ ಮೀರಿದ ಸಾಂವಿಧಾನಿಕ ಗಣರಾಜ್ಯವದು. ಯಾಕೆಂದರೆ ಅದು ಚುನಾವಣಾ ಪ್ರಜಾಪ್ರಭುತ್ವದ ತತ್ವದಾಚೆಗೂ ಇರುವ ಮೂಲಭೂತ ಮೌಲ್ಯಗಳಿಗೆ ಇಂಬು ನೀಡಿ ರಕ್ಷಿಸುವ ನಿರ್ದಿಷ್ಟ ನೀತಿನಿಯಮಗಳನ್ನು ಮತ್ತು ಸಂಸ್ಥೆಗಳನ್ನು ತನ್ನೊಳಗೆ ಹೊಂದಿದೆ. ಸಂವಿಧಾನದ ಪೀಠಿಕೆಯಲ್ಲಿ ತಿಳಿಸಲಾಗಿರುವ ಮುಖ್ಯ ಗುರಿಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಗಳಲ್ಲಿ ಈ ನೀತಿನಿಯಮಗಳು ಹಿಡಿದಿಡಲ್ಪಟ್ಟಿವೆ.

ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ಪ್ರಭುತ್ವದ ಅಧಿಕಾರ ಚಲಾವಣೆಯಾಗುವ ಸರ್ಕಾರವೇ ಪ್ರಜಾಪ್ರಭುತ್ವ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಆ ಅಧಿಕಾರವು ಕೆಲವು ನಿಯಮಗಳ ಪ್ರಕಾರವೇ ಚಲಾಯಿಸುವಂತೆ ಮಾಡುವುದು ಸಾಂವಿಧಾನಿಕ ಗಣರಾಜ್ಯ. ಹೀಗಾಗಿ ಸಂವಿಧಾನವು ಕೇವಲ ಒಂದು ನ್ಯಾಯಬದ್ಧ ರಾಜಕೀಯ ಅಧಿಕಾರದ ರಚನೆ ಮತ್ತು ಅಧಿಕಾರ ಚಲಾವಣೆಯನ್ನಷ್ಟೇ ಗುರಿಯಾಗಿ ಹೊಂದಿಲ್ಲ. ಜೊತೆಗೆ ಕೆಲವು ಮೂಲಭೂತ ಮೌಲ್ಯಗಳನ್ನು ರಕ್ಷಿಸಲೋಸುಗವಾಗಿ ಅಂತಹ ಅಧಿಕಾರ ಚಲಾವಣೆಯ ಮೇಲೆ ನಿರ್ಬಂಧಗಳನ್ನು ಸಹ ಹೇರುತ್ತದೆ.

1949ರ ಸೆಪ್ಟೆಂಬರ್ 17ರಂದು ಸಂವಿಧಾನ ಸಭೆಯಲ್ಲಿ ಮಾತನಾಡುತ್ತಾ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೀಗೆ ವಿವರಿಸಿದ್ದರು: “ಸಂವಿಧಾನದ ಉದ್ದೇಶ ಕೇವಲ ಪ್ರಭುತ್ವದ ಅಂಗಗಳನ್ನು ಸೃಷ್ಟಿಸುವುದಲ್ಲ. ಅದರ ಜೊತೆಜೊತೆಯಲ್ಲಿ ಪ್ರಭುತ್ವ ಸೃಷ್ಟಿಸಿದ ಅಂಗಗಳ ಮೇಲೆ ಸೂಕ್ತ ನಿರ್ಬಂಧ ಹೇರುವುದೂ ಆಗಿದೆ. ಅಂತಹ ನಿರ್ಬಂಧಗಳನ್ನು ಅವುಗಳ ಮೇಲೆ ಹೇರದಿದ್ದಲ್ಲಿ ಸಂಪೂರ್ಣ ಸರ್ವಾಧಿಕಾರ ಮತ್ತು ಸಂಪೂರ್ಣ ದಮನಕಾರಿ ಆಳ್ವಿಕೆ ರೂಪುಗೊಳ್ಳುತ್ತದೆ”

ಅಂಬೇಡ್ಕರ್ ಅವರ ಈ ಮಾತಿನಲ್ಲಿ ಸಂವಿಧಾನಿಕತೆ ಎಂದರೆ ಏನೆಂಬ ಪರಿಕಲ್ಪನೆಯ ವಿವರಣೆಯಿದೆ. ಪ್ರಭುತ್ವವು ತಾನು ಚಲಾಯಿಸುವ ಅಧಿಕಾರದ ಮೇಲೆ ಕಾನೂನುಬದ್ಧ ನಿರ್ಬಂಧವಿದ್ದು ಅಂತಹ ನಿರ್ಬಂಧವನ್ನು ಗೌರವಿಸುವ ಮೂಲಕವಾಗಿಯೇ ಅದಕ್ಕೆ ನ್ಯಾಯಬದ್ಧತೆ ಪ್ರಾಪ್ತವಾಗಬೇಕು ಎಂಬುದು ಇದರ ತಾತ್ಪರ್ಯ. ಹೀಗಾಗಿ, ಸಾಂವಿಧಾನಿಕ ಗಣರಾಜ್ಯವು ಪ್ರಜಾತಾಂತ್ರಿಕವಾಗಿ ಚುನಾವಣೆಗೊಂಡಂತಹ ಸರ್ಕಾರವೊಂದರ ನಡವಳಿಕೆಗಳ ವ್ಯಾಪ್ತಿಯನ್ನು ಮಿತಿಗೊಳಿಸುವ ಇರಾದೆಯನ್ನಿಟ್ಟುಕೊಂಡಿರುತ್ತದೆ.

ಪ್ರಜಾಪ್ರಭುತ್ವದ ಮುಖ್ಯ ಗುರಿಯೇ ‘ಜನತೆಯ ಇಚ್ಛೆ’ಯನ್ನು ಮುಂದಕ್ಕೊಯ್ಯುವುದಾಗಿದೆ ಎಂದಾದರೆ ಸಾಂವಿಧಾನಿಕ ಗಣರಾಜ್ಯದ ಗುರಿಯು ‘ಬಹುಸಂಖ್ಯಾತರ ಸರ್ವಾಧಿಕಾರ”ದಿಂದ (Tyranny of Majority) ಜನತೆಗೆ ಅಗತ್ಯ ರಕ್ಷಣೆ ಒದಗಿಸುವುದಾಗಿದೆ. ಯಾವುದೇ ಸರ್ಕಾರವಾಗಲೀ, ಬಹುದೊಡ್ಡ ಜನಾದೇಶವಾಗಲೀ ತನ್ನ ಪ್ರಜೆಗಳಿಗೆ ನಿರಾಕರಿಸಲಾಗದ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನ ಜನತೆಗೆ ನೀಡಿದೆ. ಕಾನೂನಿನ ಆಳ್ವಿಕೆ, ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ, ನಾಗರಿಕರನ್ನು ಸಮಾನವಾಗಿ ಕಾಣುವುದು ಮತ್ತು ಅಧಿಕಾರದ ಬೇಕಾಬಿಟ್ಟಿ ಚಲಾವಣೆಯಿಂದ ಸ್ವಾತಂತ್ರ್ಯ ಈ ನಿಯಮಗಳನ್ನು ಪ್ರಭುತ್ವ ಪಾಲಿಸಬೇಕೆಂದು ಸಂವಿಧಾನಿಕ ಗಣರಾಜ್ಯ ತಿಳಿಸುತ್ತದೆ.

ಈ ಸಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ಬಂದೊದಗಿದಾಗ, ಅವುಗಳನ್ನು ಪುನರ್ ಪ್ರತಿಪಾದಿಸಿ ಪುನರ್ ಘೋಷಿಸುವ ಪ್ರಯತ್ನಗಳು ಸಾವರ್ಜನಿಕ ಬೆಂಬಲ ಪಡೆಯುತ್ತವೆ. ಸಂವಿಧಾನದ ಇಂತಹ ಅಮೂರ್ತ ಮೌಲ್ಯಗಳಿಗೆ ಈಗ ನಡೆಯುತ್ತಿರುವ CAA ಮತ್ತು NRC ವಿರೋಧಿ ಪ್ರತಿಭಟನೆಗಳು ಜೀವ ನೀಡಿವೆ ಎನ್ನಬಹುದು. ಈ ಪ್ರಕ್ರಿಯೆ ನಾನಾ ಬಗೆಯ ಅಭಿವ್ಯಕ್ತಿ ರೂಪಗಳ ಮೂಲಕ ನಡೆಯುತ್ತಿದೆ. ಭಾರತದ ಸಂವಿಧಾನವು ವಕೀಲರು, ನ್ಯಾಯಾಧೀಶರು, ವಿದ್ವಾಂಸರು ಮತ್ತು ಸರ್ಕಾರಿ ಅಧಿಕಾರಿಗಳ ಸೀಮಿತ ಹಿಡಿತದಿಂದ ಬಿಡಿಸಿಕೊಂಡು ಇದೀಗ ಜನಸಾಮಾನ್ಯರ ದಸ್ತಾವೇಜಾಗಿ ಹೊರಹೊಮ್ಮುತ್ತಿದೆ.

ಜನರು ಸಂವಿಧಾನದ ತತ್ವಗಳನ್ನು ತಮ್ಮದೇ ಸೃಜನಶೀಲ ರೀತಿಯಲ್ಲಿ ಎತ್ತಿಹಿಡಿಯಲು ದೇಶದಲ್ಲಿ ಒಳ್ಳೆಯ ನಾಗರಿಕ ಶಿಕ್ಷಣ ವ್ಯವಸ್ಥೆ ಇಲ್ಲದಿರುವುದು ಯಾವುದೇ ರೀತಿ ಅಡ್ಡಿಯಾಗಿಲ್ಲ. ಈ ಸಲದ ಗಣರಾಜ್ಯದ ದಿನಕ್ಕೆ ಸ್ಪೂರ್ತಿ ತುಂಬುವುದು ಅಂತಹ ಒಂದು ಸಂವಿಧಾನ ಸಂಸ್ಕೃತಿಯೇ ಹೊರತು ಸಂವಿಧಾನದಲ್ಲಿ ಏನಿದೆ ಏನಿಲ್ಲ ಎಂಬುದರ ಸಂಕುಚಿತ ವ್ಯಾಖ್ಯಾನಗಳಲ್ಲ. ದೇಶದ ಚರಿತ್ರೆಯಲ್ಲಿ ತೀವ್ರ ಪ್ರಯಾಸದ ಸುದೀರ್ಘ ಹೋರಾಟದ ಮೂಲಕ ಗಳಿಸಿಕೊಂಡಿರುವ ಮೌಲ್ಯಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಬೀದಿಗಳಿಂದ ನ್ಯಾಯಾಲಯಗಳವರೆಗೆ ದೇಶದ ಜನರು ಸಂವಿಧಾನದ ಈ ಮೌಲ್ಯಗಳಿಗೆ ಎದುರಾಗಿರುವ ಆತಂಕಗಳನ್ನು ಸಾಮೂಹಿಕವಾಗಿ ಎದುರಿಸಿ ನಿಲ್ಲಬೇಕಾಗಿರುವುದು ಈ ಹೊತ್ತಿನ ತುರ್ತು.

ಲೇಖಕ: ಮ್ಯಾಥ್ಯೂ ಇಡಿಕುಲ್ಲಾ

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.