ಮುಂಬೈ: ದ್ವಿಚಕ್ರ ವಾಹನ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಕಾರಿನ ಮಧ್ಯೆ ಸಣ್ಣ ಪ್ರಮಾಣದ ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಘಟನೆ ನಡೆದಿದೆ. ಬೈಕ್ ಹಿಂದಿನಿಂದ ಬಂದು ಕಾರಿಗೆ ತಾಕಿದ್ದು, ರಣವೀರ್ ಈ ವೇಳೆ ಕಾರಿನಿಂದಿಳಿದು ಕೆಲ ನಿಮಿಷ ಪರಿಶೀಲನೆ ನಡೆಸಿ ನಂತರ ಸ್ಥಳದಿಂದ ತೆರಳಿದ್ದಾರೆ.
ಸದ್ಯಕ್ಕೆ ರಣವೀರ್ ಸಿಂಗ್ ಕಬೀರ್ ಖಾನ್ ನಿರ್ದೇಶನದ ಕ್ರೀಡಾ ಬಯೋಪಿಕ್ '83'ರಲ್ಲಿ ತೊಡಗಿಸಿಕೊಂಡಿದ್ದು, ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ರಣವೀರ್ಗೆ ಪತ್ನಿಯಾಗಿ ನಟಿ ದೀಪಿಕಾ ಕಾಣಿಸಿಕೊಳ್ಳಲಿದ್ದು, ಕಪಿಲ್ ಪತ್ನಿ ರೋಮಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಈ ಚಿತ್ರವು ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಬಗೆಗಿನ ಕಥೆಯನ್ನು ಆಧರಿಸಿರಲಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಜಯೇಶ್ ಭಾಯ್ ಜೋರ್ದಾರ್ ಎಂಬಲ್ಲಿ ಮತ್ತೊಂದು ಚಿತ್ರದಲ್ಲಿಯೂ ರಣವೀರ್ ಸಿಂಗ್ ತೊಡಗಿಸಿಕೊಂಡಿದ್ದು, ಈ ಚಿತ್ರವನ್ನು ದಿವ್ಯಾಂಗ್ ಥಕ್ಕರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಗುಜರಾತಿ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇದರ ಜೊತೆಗೆ ತಖ್ತ್ ಎಂಬ ಕರಣ್ ಜೋಹರ್ ಚಿತ್ರದಲ್ಲಿಯೂ ರಣವೀರ್ ಕಾಣಿಸಿಕೊಳ್ಳುತ್ತಿದ್ದು, ಮೊಘಲ್ ಕಾಲದ ಕತೆಯನ್ನು ಒಳಗೊಂಡಿದೆ.