ಭುವನೇಶ್ವರ್ (ಒಡಿಶಾ): ಮಂಗಳಮುಖಿಯರು ನಿತ್ಯ ರಸ್ತೆ, ನಿಲ್ದಾಣ, ರೈಲ್ವೆ ಪ್ಲಾಟ್ ಫಾರ್ಮ್, ಮಾರುಕಟ್ಟೆ, ಬೀದಿಗಳಲ್ಲಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿರುವುದನ್ನು ನೋಡಿರಬಹುದು. ಆದರೆ, ಈ ಮಂಗಳಮುಖಿ ದೇಶದಲ್ಲೇ ಮೊದಲ ಫೈವ್ ಸ್ಟಾರ್ ಕ್ಯಾಬ್ ಡ್ರೈವರ್ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಒಡಿಶಾದ ರಾಣಿ ಕಿನ್ನರ ಎಂಬುವರು 5 ಸ್ಟಾರ್ ಉಬರ್ ಕ್ಯಾಬ್ ಡ್ರೈವರ್ ಆಗಿದ್ದು, ಸ್ವಾವಲಂಬನೆ ಬದುಕು ಕಟ್ಟಿಕೊಂಡಿದ್ದಾರೆ. ಇವರು ಆರಂಭದಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದರು, ಆದರೆ ಇವರ ಆಟೋದಲ್ಲಿ ತೆರಳಲು ಜನರು ಹಿಂಜರಿಯುತ್ತಿದ್ದರು. ಜನರು ಇವರನ್ನು ಆಟೋ ರಿಕ್ಷಾ ಡ್ರೈವರ್ ಆಗಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಬಳಿಕ ಪುರಿಯಲ್ಲಿ ನಡೆದ ಪವಿತ್ರ ರಥಯಾತ್ರೆಯಲ್ಲಿ ಆಂಬುಲೆನ್ಸ್ ಚಾಲಕಿಯಾಗಿ ಕಾರ್ಯನಿರ್ವಹಿಸಿದ್ದರು.
ಹೀಗೆ ರಾಣಿಯವರು ಸಮಾಜದಲ್ಲಿ ಜನರಿಂದ ತಿರಸ್ಕೃತಗೊಂಡಾಗ ಇವರ ಬೆಂಬಲಕ್ಕೆ ನಿಂತಿದ್ದು ಓರ್ವ ಮಾಜಿ ಓಲಾ ಕ್ಯಾಬ್ ಚಾಲಕ. ಆತ ರಾಣಿಗೆ ಮತ್ತೆ ಡ್ರೈವರ್ ವೃತ್ತಿಗೆ ಮರಳಲು ನೆರವಾಗಿದ್ದ. ಓಲಾ ಕಡೆಯಿಂದ ನಡೆದ ಸಂದರ್ಶನದಲ್ಲಿ ಯಶಸ್ಸು ಕಂಡ ರಾಣಿ, ಬಳಿಕ ತಮ್ಮದೇ ಸ್ವಂತ ಕಾರು ಖರೀದಿಸಿದ್ದು, ಸಮಾಜದಲ್ಲಿನ ಇತರ ಅನೇಕ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾದರಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಣಿ, '2016ರಲ್ಲಿ ನಾನು ಆಟೋ ಚಾಲಕಿಯಾಗಿ ಕಾರ್ಯ ಆರಂಭಿಸಿದ್ದೆ ಆದರೆ, ನನ್ನ ಆಟೋ ಹತ್ತುವ ಮನಸ್ಸು ಮಾಡುತ್ತಿರಲಿಲ್ಲ. ಬಳಿಕ 2017ರಲ್ಲಿ ನನಗೆ ಪುರಿ ರಥೋತ್ಸವದಲ್ಲಿ ಆಂಬುಲೆನ್ಸ್ ಡ್ರೈವರ್ ಆಗುವ ಅವಕಾಶ ದೊರೆಯಿತು' ಎಂದು ಹೇಳಿದ್ದಾರೆ.
ಇನ್ನು ರಾಣಿಯವರ ಸ್ವಂತಿಕೆಯ ಜೀವನ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು, 'ನಾನೂ ಕೂಡ ರಾಣಿಯವರ ದಾರಿಯಲ್ಲೇ ತೆರಳಲು ನಿರ್ಧರಿಸಿದ್ದೇನೆ. ನಾವು ಕ್ಯಾಬ್ ಡ್ರೈವರ್ ಆದರೆ ನಮ್ಮ ಜೊತೆ ಪ್ರಯಾಣಿಸುವುದು ಸುರಕ್ಷಿತ ಎಂಬ ಭಾವನೆ ಮಹಿಳೆಯರಲ್ಲಿ ಮೂಡುತ್ತದೆ. ಅಲ್ಲದೆ, ರಾತ್ರಿ ವೇಳೆ ಪುರುಷರಿಗಿಂತ ನಮ್ಮೊಂದಿಗೆ ಪ್ರಯಾಣ ಮಾಡುವುದೇ ಹೆಚ್ಚು ಸುರಕ್ಷಿತ. ರಾಣಿಯವರಂತೆಯೇ ನಾನೂ ಕೂಡ ಕ್ಯಾಬ್ ಡ್ರೈವರ್ ಆಗುತ್ತೇನೆ' ಎಂದು ಮತ್ತೋರ್ವ ಮಂಗಳಮುಖಿ ಸ್ನೇಹಶ್ರೀ ಕಿನ್ನರ್ ಹೇಳುತ್ತಾರೆ.
ಒಟ್ಟಾರೆ ಉಬರ್ ಕ್ಯಾಬ್ ಡ್ರೈವರ್ ಆಗಿರುವ ಒಡಿಶಾದ ಮಂಗಳಮುಖಿ ರಾಣಿ ಕಿನ್ನರ್ ಅವರ ಸ್ವಾವಲಂಬಿ ಬದುಕು ಇತರರಿಗೆ ಮಾದರಿಯಾಗಿದೆ.