ಹರಿದ್ವಾರ (ಉತ್ತರಾಖಂಡ): ಕೊರೊನಾಗೆ ಮೊದಲ ಆಯುರ್ವೇದಿಕ್ ಮಾತ್ರೆಗಳನ್ನು ಕಂಡುಹಿಡಿಯಲಾಗಿದೆ. ಈ ಮಾತ್ರೆಗಳು ಕೇವಲ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೇ ಕೊರೊನಾ ವೈರಸ್ ವಿರುದ್ಧ ಹೋರಾಡಿ ರೋಗ ಗುಣಪಡಿಸುವ ಸಾಮರ್ಥ್ಯ ಹೊಂದಿವೆ ಎಂದು ಪತಂಜಲಿ ಯೋಗಪೀಠ ಹಾಗೂ ಪತಂಜಲಿ ಆಯುರ್ವೇದದ ಸಂಸ್ಥಾಪಕ ಹಾಗೂ ಮುಖ್ಯಸ್ಥ ಯೋಗ ಗುರು ಬಾಬಾ ರಾಮದೇವ್ ಭರವಸೆ ನೀಡಿದ್ದಾರೆ.
ಹರಿದ್ವಾರದಲ್ಲಿರುವ ಪತಂಜಲಿ ಯೋಗ ಪೀಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಾಬಾ ರಾಮದೇವ್, ಕೊರೊನಾ ಸೋಂಕು ಗುಣಪಡಿಸುತ್ತದೆ ಎಂದು ಹೇಳಲಾದ ಮಾತ್ರೆಗಳಿರುವ ಕೊರೊನಿಲ್ ಕಿಟ್ ಅನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಕೊರೊನಾಗೆ ಮೊದಲ ಆಯುರ್ವೇದಿಕ್ ಔಷಧವನ್ನು ಬಿಡುಗಡೆ ಮಾಡಿದ್ದೇವೆ. ಸೋಂಕಿತರ ಮೇಲೆ ಪ್ರಯೋಗವನ್ನು ಮಾಡಿದ್ದು ಸಕಾರಾತ್ಮಕ ಫಲಿತಾಂಶವನ್ನು ಕಂಡುಕೊಂಡಿದ್ದೇವೆ. ಈ ಔಷಧದಿಂದ ಮೂರು ದಿನದಲ್ಲಿ ಶೇಕಡಾ 69ರಷ್ಟು ಮಂದಿ ಹಾಗೂ ಏಳು ದಿನದಲ್ಲಿ ಶೇಕಡಾ 100ರಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ ಕೊರೊನಾ ಗುಣಪಡಿಸುವ ಮಾತ್ರೆಗಳನ್ನು ಸಂಶೋಧನೆ ಮಾಡಲಾಗಿದ್ದು, ರಾಜಸ್ಥಾನದ ಜೈಪುರದಲ್ಲಿರುವ ನಿಮ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಾಬಾ ರಾಮದೇವ್ ಹೇಳಿದ್ದಾರೆ. 3ರಿಂದ 15 ದಿನಗಳ ಒಳಗೆ ಕೊರೊನಾ ಸೋಂಕಿತರು ಗುಣಮುಖರಾಗುವ ಭರವಸೆಯನ್ನು ಅವರು ನೀಡಿದ್ದಾರೆ.
ಕೊರೊನಾಗೆ ಬಿಡುಗಡೆ ಮಾಡಿರುವ ಮಾತ್ರೆಗಳನ್ನು ಕೇವಲ 15 ರಿಂದ 80 ವರ್ಷ ವಯಸ್ಸಿನ ಒಳಗಿರುವವರು ಮಾತ್ರ ತೆಗೆದುಕೊಳ್ಳಬೇಕು. 15 ವರ್ಷದೊಳಗಿನ ಮಕ್ಕಳು ಒಂದು ಬಾರಿಗೆ ಮಾತ್ರೆಯ ಅರ್ಧದಷ್ಟನ್ನು ತೆಗೆದುಕೊಳ್ಳಬೇಕೆಂದು ಪತಂಜಲಿ ಸಂಸ್ಥೆ ಸ್ಪಷ್ಟೀಕರಣ ನೀಡಿದೆ.
ಈ ಮಾತ್ರೆಗಳನ್ನು ಪತಂಜಲಿ ಸಂಸ್ಥೆ ದಿವ್ಯ ಕೊರೊನಿಲ್ ಮಾತ್ರೆ ಎಂದು ಕರೆದಿದ್ದು, ತುಳಸಿ, ಅಶ್ವಗಂಧ ಸೇರಿ ಮುಂತಾದ ಗಿಡಮೂಲಿಕೆಗಳಿಂದ ಔಷಧ ತಯಾರಿಸಲಾಗಿದೆ. ದಿನಕ್ಕೆ ಮೂರು ಬಾರಿ ಅಂದರೆ ಬೆಳಗ್ಗೆಯ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟದ ನಂತರ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದೆ.