ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ಮಂದಿರವು ದೇಶದ ಭವ್ಯ ಮಂದಿರವಾಗಲಿದ್ದು, 1000 ವರ್ಷದವರೆಗೆ ಗಟ್ಟಿಯಾಗಿರುವ ಹಾಗೆ ನಿರ್ಮಾಣವಾಗಲಿದೆ.
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ರಾಮ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪರ್ ರಾಯ್, ಭೂಕಂಪ ಸೇರಿದಂತೆ ನೈಸರ್ಗಿಕ ವಿಪತ್ತುಗಳನ್ನು ತಡೆದುಕೊಂಡು 1 ಸಾವಿರ ವರ್ಷದವರೆಗೆ ಗಟ್ಟಿಯಾಗಿರುವ ಹಾಗೆ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಂದಿರ ನಿರ್ಮಾಣಕ್ಕೆ ಬಳಸುವ ಕಲ್ಲಿಗೆ ಮಳೆ, ಬಿಸಿಲು ಹಾಗೂ ಗಾಳಿಯಿಂದ ಕನಿಷ್ಠ 1 ಸಾವಿರ ವರ್ಷದವರೆಗೆ ಏನೂ ಆಗಲ್ಲ. ನಿರ್ಮಾಣ ಕಂಪನಿ ಎಲ್ ಆ್ಯಂಡ್ ಟಿಯು ಮಂದಿರ ನಿರ್ಮಾಣದಲ್ಲಿ ತಜ್ಞ ಪರಿಣತರನ್ನು ಬಳಸಿಕೊಳ್ಳಲಿದೆ. ಚೆನ್ನೈನ ಐಐಟಿಯು ಮಣ್ಣಿನ ಸಾಮರ್ಥ್ಯವನ್ನು ಪರೀಕ್ಷಿಸಲಿದೆ. ಮಂದಿರದ ಕಟ್ಟಡವು ಭೂಕಂಪ ಪ್ರತಿರೋಧಕ ಎಂಬುದರ ಬಗ್ಗೆ ಸೆಂಟ್ರಲ್ ಬಿಲ್ಡಿಂಗ್ ರಿಸರ್ಜ್ ಸಂಸ್ಥೆ ಖಚಿತಪಡಿಸಲಿದೆ ಎಂದು ರಾಯ್ ತಿಳಿಸಿದ್ದಾರೆ.
ಒಂದು ಮೀಟರ್ ವ್ಯಾಸದ 1200 ಕಂಬಗಳಿಂದ ಅಡಿಪಾಯ ಹಾಕಿ, ಕಾಂಕ್ರಿಟ್ನಿಂದ ಭರ್ತಿ ಮಾಡಲಾಗುತ್ತದೆ. ಇದರಲ್ಲಿ ಕಬ್ಬಿಣ ಬಳಸುವುದಿಲ್ಲ. ಕಾಂಕ್ರಿಟ್ ಕಂಬಗಳು ಆಳದಲ್ಲಿ ಹೋಗುವುದರಿಂದ ಮಂದಿರಕ್ಕೆ ಭೂಕಂಪದಿಂದ ಯಾವ ಹಾನಿಯೂ ಆಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಭವ್ಯ ಮಂದಿರ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಕೈಗೊಂಡಿದ್ದೇವೆ. ಆದ್ರೆ 36 ತಿಂಗಳಲ್ಲಿ ಪೂರ್ಣಗೊಳಿಸಲು ಆಗಲ್ಲ. 40 ತಿಂಗಳಲ್ಲಿ ಮಂದಿರ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ.