ಅಯೋಧ್ಯೆ (ಉತ್ತರ ಪ್ರದೇಶ) : ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಕಾಮಗಾರಿ ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಲಿದ್ದು, ಮೂರು ವರ್ಷಗಳಲ್ಲಿ ದೇವಾಲಯ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀ ರಾಮ್ ಜನಮಭೂಮಿ ಟ್ರಸ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐದು ಎಕರೆ ಪ್ರದೇಶದಲ್ಲಿ ಮುಖ್ಯ ದೇವಾಲಯ ನಿರ್ಮಾಣವಾಗಲಿದ್ದು, 360 ಅಡಿ ಉದ್ದ, 235 ಅಡಿ ಅಗಲ ಮತ್ತು 161 ಅಡಿ ಎತ್ತರದ 3 ಅಂತಸ್ತಿನ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
400 ವರ್ಷಗಳಷ್ಟು ಬಾಳಿಕೆ ಬರುವ ಸಾಮರ್ಥ್ಯವುಳ್ಳ ವಿಶೇಷ ಸಿಮೆಂಟ್ ಅನ್ನು ದೇವಾಲಯದ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ. ದೇವಾಲಯಕ್ಕೆ ಪ್ರವೇಶಿಸಲು ಮೆಟ್ಟಿಲು 22 ಮೆಟ್ಟಿಲುಗಳಿದ್ದು, ಹಿರಿಯ ನಾಗರಿಕರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಎಸ್ಕಲೇಟರ್, ಲಿಫ್ಟ್ಗಳ ಸೌಲಭ್ಯ ಕೂಡಾ ಇರಲಿದೆ. ಉಳಿದ ಸುಮಾರು 65 ಎಕರೆ ಭೂಮಿಯಲ್ಲಿ, ಇತರ ನಿರ್ಮಾಣ ಕಾರ್ಯಗಳನ್ನು ಏಕಕಾಲದಲ್ಲಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪೇಜಾವರ ಶ್ರೀಗಳಿಗೆ 'Y' ಭದ್ರತೆ ಕಲ್ಪಿಸಿದ ರಾಜ್ಯ ಸರ್ಕಾರ
ಶ್ರೀ ರಾಮ್ ಜನ್ಮಭೂಮಿ ಟ್ರಸ್ಟ್ ಪ್ರಕಾರ, ಗುತ್ತಿಗೆ ಪಡೆದಿರುವ ಕಂಪನಿಗಳು ಕಾಮಗಾರಿ ಪೂರ್ಣಗೊಳಿಸಲು ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತವೆ. 2023ರ ಡಿಸೆಂಬರ್ ವೇಳೆಗೆ ರಾಮಮಂದಿರ ಪೂರ್ಣಗೊಳ್ಳುವ ಸಾಧ್ಯತೆಯಿದೆ. ದೇವಾಲಯದ ನಿರ್ಮಾಣ ಮುಗಿದ ನಂತರ ಪ್ರತಿದಿನ 50 ಸಾವಿರ ಯಾತ್ರಾರ್ಥಿಗಳು ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಮತ್ತೊಂದೆಡೆ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹವು ಈಗ ಪ್ರಾರಂಭವಾಗಲಿದೆ ಮತ್ತು ಈ ದೇಣಿಗೆ ಸಂಗ್ರಹ ಮಾಘ ಪೂರ್ಣಿಮೆಯವರೆಗೆ ಮುಂದುವರಿಯುತ್ತದೆ. ಸುಮಾರು 4 ಲಕ್ಷ ಕಾರ್ಯಕರ್ತರು 11 ಕೋಟಿ ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.