ನವದೆಹಲಿ: 35ಎ ವಿಧಿ ರದ್ದು ಮಾಡುವ ಕೇಂದ್ರದ ನಿರ್ಧಾರದ ವಿರುದ್ಧ ಗುಡುಗುತ್ತಿರುವ ಕಾಶ್ಮೀರದ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಿರುಗೇಟು ನೀಡಿದ್ದಾರೆ.
ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮುಫ್ತಿ ಸ್ಥಳೀಯರಲ್ಲಿ ಆತಂಕ ಉಂಟುಮಾಡುತ್ತಿದ್ದಾರೆ ಎಂದು ರಾಮ್ ಮಾಧವ್ ಹೇಳಿಕೆ ನೀಡಿದ್ದಾರೆ. ಈ ಮೂಲಕ 35ಎ ವಿಧಿ ರದ್ದತಿ ನಿರ್ಧಾರ, ಹೆಚ್ಚಿನ ಸೇನಾ ನಿಯೋಜನೆ ಮೂಲಕ ಬಿಗಿ ಬಂದೋಬಸ್ತ್ ಮಾಡಿದ ಕೇಂದ್ರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಮೆಹಬೂಬ್ ಮುಫ್ತಿ ಹಾಗೂ ಮತ್ತಿತರ ನಾಯಕರನ್ನು ಟೀಕಿಸಿದ್ದಾರೆ.
ಕಾಶ್ಮೀರದ ಸ್ಥಳೀಯ ನಾಯಕರು ಸ್ವಾರ್ಥಕ್ಕಾಗಿ ಜನರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ಇಲ್ಲಿನ ಸ್ಥಿತಿಗತಿ ಅರಿತೇ ಕೇಂದ್ರ ಅಗತ್ಯ ಹೆಜ್ಜೆ ಇಡುತ್ತಿದೆ. ಸೇನಾ ನಿಯೋಜನೆ ಎಂಬುದು ಇಲ್ಲಿ ನಿರಂತರ ಪ್ರಕ್ರಿಯೆ ಎಂದು ಸಮರ್ಥನೆ ನೀಡಿದ್ದಾರೆ. ರಾಜಕೀಯವಾಗಿ ಅಲುಗಾಡುತ್ತಿರುವ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆಕೆ (ಮೆಹಬೂಬ ಮುಫ್ತಿ) ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಅವರ ಪಕ್ಷದವರೇ ಪಕ್ಷದ ಸಂಸ್ಥಾಪನಾ ದಿನಾಚರಣೆ ವೇಳೆ ನಡೆದ ಸಭೆಗೆ ಹಾಜರಾಗಿಲ್ಲ ಎಂದು ಛೇಡಿಸಿದ್ದಾರೆ.