ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮತ್ತೊಂದು ಮಹತ್ವದ ಗೆಲುವು ಲಭಿಸಿದ್ದು, ಭಾರಿ ವಿವಾದ ಸೃಷ್ಟಿಸಿದ್ದ ತ್ರಿವಳಿ ತಲಾಖ್ ನಿಷೇಧ ಬಿಲ್ ರಾಜ್ಯಸಭೆಯಲ್ಲೂ ಪಾಸ್ ಆಗಿದೆ.
ಕಳೆದ ಕೆಲ ದಿನಗಳ ಹಿಂದೆ ವಿವಾದಿತ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಇದೀಗ ರಾಜ್ಯಸಭೆಯಲ್ಲಿಸದಸ್ಯರ ವೋಟಿಂಗ್ ಮೂಲಕ ಮಸೂದೆಗೆ ಅಂಕಿತ ಸಿಕ್ಕಿದೆ. ವಿಧೇಯಕದ ಪರ 99 ಮತಗಳು ಚಲಾವಣೆಗೊಂಡಿದ್ದು, ವಿರುದ್ಧವಾಗಿ 84 ವೋಟ್ ಬಿದ್ದವು.
ಮೇಲ್ಮನೆಯಲ್ಲಿ ತ್ರಿವಳಿ ತಲಾಖ್ ಮೇಲಿನ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗು ಎಐಎಡಿಎಂಕೆ ಸದಸ್ಯರು ಕಲಾಪದಿಂದ ಹೊರ ನಡೆದರು. ಹೀಗಾಗಿ ಮಸೂದೆಗೆ ಅನುಮೋದನೆ ದೊರೆಯುವುದು ಬಹುತೇಕ ಖಚಿತವಾಗಿತ್ತು.
ಮುಸ್ಲಿಂ ಮಹಿಳೆಯರ 'ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ- 2019'ಯನ್ನು ಈ ಹಿಂದೆ 3ನೇ ಬಾರಿಗೆ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಎರಡು ಬಾರಿ ಲೋಕಸಭೆಯಲ್ಲೂ ಬಿಲ್ ಮಂಡನೆಯಾಗಿತ್ತು. ಆದ್ರೆ, ಅಂಗೀಕಾರ ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ಬಿಲ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಈಗಾಗಲೇ ಭಾರತದಲ್ಲಿ ಮೂರು ಬಾರಿ ತಲಾಖ್ ಎಂದು ಹೇಳುವುದು; ಮೊಬೈಲ್ ಫೋನಿನ ಮೂಲಕ, ವಾಟ್ಸಪ್, ಪತ್ರದ ಮೂಲಕ ಮೂರು ಬಾರಿ ತಲಾಖ್ ಎಂದು ಬರೆದು ವಿಚ್ಚೇಧನ ಪಡೆಯುವ ಪದ್ದತಿ ಇತ್ತು. ಆದ್ರೀಗ ಮಸೂದೆ ಸಂಸತ್ತಿನ ಎರಡೂ ಸದನಗಳಲ್ಲಿ ಪಾಸ್ ಆಗಿದ್ದು ರಾಷ್ಟ್ರಪತಿಗಳ ಮುದ್ರೆಯೊಂದಿಗೆ ಕಾಯ್ದೆಯಾಗಲಿದೆ. ಈ ಮೂಲಕವಾಗಿ ಅಕ್ರಮ ತಲಾಖ್ ಪದ್ಧತಿಗೆ ಕಡಿವಾಣ ಬೀಳಲಿದೆ.
ಈಗಾಗಲೇ 20ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿವೆ. ಆದರೆ ಜಾತ್ಯತೀತ ಭಾರತ ಯಾವ್ಯಾವುದೋ ಕಾರಣಕ್ಕೆ ಇದುವರೆಗೂ ಇಂಥದ್ದೊಂದು ಕಾನೂನು ಜಾರಿಗೆ ತಂದಿಲ್ಲ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ರು.