ನವದೆಹಲಿ: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಬಿಜೆಪಿಯ ಗಟ್ಟಿಗಿತ್ತಿ ನಾಯಕಿಯ ಅಗಲಿಕೆಗೆ ರಾಜಕೀಯ ರಂಗ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇಂದು ನವದೆಹಲಿಯ ಲೋಧಿ ಸ್ಮಶಾನದಲ್ಲಿ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಇದಕ್ಕೂ ಮೊದಲು ಸುಷ್ಮಾ ಪಾರ್ಥಿವ ಶರೀರವನ್ನು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು. ಬಿಜೆಪಿ ಸೇರಿದಂತೆ ದೇಶದ ಪ್ರಬಲ ರಾಜಕೀಯ ನಾಯಕರು ಸುಷ್ಮಾಗೆ ಅಂತಿಮ ನಮನ ಸಲ್ಲಿಸಿದರು. ಬಿಜೆಪಿ ಕಚೇರಿಯಲ್ಲಿ ಸುಷ್ಮಾ ಪಾರ್ಥಿವ ಶರೀರಕ್ಕೆ ಕೇಸರಿ ಬಾವುಟ ಹೊದಿಸಿ ಗೌರವ ಸಲ್ಲಿಸಲಾಯ್ತು.
ಈ ವೇಳೆ, ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್, ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಸುಷ್ಮಾ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಅಂತಿಮ ನಮನ ಸಲ್ಲಿಸಿದರು.
7 ಬಾರಿ ಸಂಸದೆಯಾಗಿ, 3 ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಸುಷ್ಮಾ, ಭಾರತದ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ ಏಕೈಕ ಮಹಿಳೆ. ವಿದೇಶಾಂಗ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿ, ದಕ್ಷ ನಾಯಕಿಯಾಗಿ ಪ್ರಧಾನಿ ಸಂಪುಟಕ್ಕೆ ಬಲ ತುಂಬಿದ್ದರು. ಸದ್ಯ ಸುಷ್ಮಾ ಅವರ ಅಗಲಿಕೆಯಿಂದ ಬಿಜೆಪಿ ಬಲ ಕಳೆದುಕೊಂಡಂತಾಗಿದೆ.