ನವದೆಹಲಿ: ಚೀನಾದ ಪರವಾಗಿ ಬೇಹುಗಾರಿಕೆ ಆರೋಪದಡಿ ಬಂಧಿಸಲ್ಪಟ್ಟಿರುವ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ರಾಜೀವ್ ಶರ್ಮಾ ಅವರನ್ನು ಅಧಿಕೃತ ರಹಸ್ಯ ಕಾಯ್ದೆಯಡಿ ಸೆಪ್ಟೆಂಬರ್ 14ರಂದು ಬಂಧಿಸಲಾಗಿತ್ತು.
ಏಳು ದಿನ ಪೊಲೀಸ್ ಕಸ್ಟಡಿ:
ಇಂದು ರಾಜೀವ್ ಶರ್ಮಾ ಅವರ ಪೊಲೀಸ್ ಕಸ್ಟಡಿ ಕೊನೆಗೊಂಡ ಹಿನ್ನೆಲೆ ಅವರನ್ನು ಪಟಿಯಾಲ ಹೌಸ್ ಕೋರ್ಟ್ಗೆ ಹಾಜರುಪಡಿಸಲಾಯಿತು. ವಿಶೇಷ ತನಿಖಾ ದಳವು ಮತ್ತೆ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಿತ್ತು. ಹೀಗಾಗಿ ನ್ಯಾಯಾಲಯವು ರಾಜೀವ್ ಶರ್ಮಾರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲು ಆದೇಶಿಸಿತು.
ರಾಜೀವ್ ಶರ್ಮಾರೊಂದಿಗೆ ಸಂಬಂಧ ಹೊಂದಿದ್ದ ಚೀನಾದ ಮಹಿಳೆ ಮತ್ತು ನೇಪಾಳಿ ಮೂಲದ ವ್ಯಕ್ತಿಯನ್ನು ಕೂಡಾ ಬಂಧಿಸಲಾಗಿದೆ. ರಾಜೀವ್ ಶರ್ಮಾ ಅವರಿಗೆ ನಕಲಿ ಕಂಪನಿಗಳ ಮೂಲಕ ಇವರಿಬ್ಬರು ಹಣ ಒದಗಿಸುತ್ತಿದ್ದರು ಎಂಬ ಆರೋಪವಿದೆ.
ಜಾಮೀನು ಅರ್ಜಿ ಸಲ್ಲಿಕೆ:
ರಾಜೀವ್ ಶರ್ಮಾ ಪಟಿಯಾಲ ಹೌಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ, ನಾನು ಯಾವುದೇ ಅಪರಾಧ ಮಾಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ರಾಜೀವ್ ಶರ್ಮಾರನ್ನು ಸೆಪ್ಟೆಂಬರ್ 14ರಂದು ದೆಹಲಿಯ ಜನಕ್ಪುರಿಯಿಂದ ಬಂಧಿಸಲಾಗಿದೆ.
ರಾಜೀವ್ ಶರ್ಮಾರನ್ನು ಅಧಿಕೃತ ರಹಸ್ಯ ಕಾಯ್ದೆಯಡಿ ಬಂಧಿಸಲಾದ್ದು, ಅವರಿಂದ ಗೌಪ್ಯ ಭದ್ರತಾ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜೀವ್ ಶರ್ಮಾ ಪರವಾಗಿ ಯಾವುದೇ ಸಮರ್ಥ ಪುರಾವೆಗಳಿಲ್ಲ ಎಂದು ದೆಹಲಿ ಪೊಲೀಸರ ವಿಶೇಷ ತಂಡ ತಿಳಿಸಿದೆ.
ರಾಜೀವ್ ಶರ್ಮಾಗೆ ಆರೋಗ್ಯ ಸಮಸ್ಯೆ:
ರಾಜೀವ್ ಶರ್ಮಾ ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ. ರಾಜೀವ್ ಶರ್ಮಾ ಪತ್ನಿ ವೆಂಕಟೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲ. ಕಸ್ಟಡಿಯಲ್ಲಿರಿಸಿ ರಾಜೀವ್ ಶರ್ಮಾ ವಿಚಾರಣೆ ಮಾಡುವ ಅಗತ್ಯವಿಲ್ಲ. ಅವರಿಗೆ ಸೈನಸ್ ಹಾಗೂ ರಕ್ತದೊತ್ತಡ ಕಾಯಿಲೆ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಾಜೀವ್ ಶರ್ಮಾ ಅವರಿಗೆ 61 ವರ್ಷ ವಯಸ್ಸಾಗಿದ್ದು, ಸೈನಸ್ ಹಾಗೂ ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ಕೊರೊನಾ ಸೋಂಕು ತಗುಲುವ ಅಪಾಯವೂ ಹೆಚ್ಚಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಎಫ್‌ಐಆರ್ ಪ್ರತಿ ನೀಡುತ್ತಿಲ್ಲ:
ರಾಜೀವ್ ಶರ್ಮಾ ವಿರುದ್ಧ ದಾಖಲಾದ ಎಫ್‌ಐಆರ್ ಪ್ರತಿಯನ್ನು ವಿಶೇಷ ತನಿಖಾ ತಂಡ ಒದಗಿಸುತ್ತಿಲ್ಲ. ಈ ಎಫ್‌ಐಆರ್ ದೆಹಲಿ ಪೊಲೀಸ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗಿಲ್ಲ ಎಂದು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.