ಚೆನ್ನೈ: ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ರಜಿನಿಕಾಂತ್ ಅಂತಿಮವಾಗಿ ರಾಜಕೀಯ ಕ್ಷೇತ್ರದ ಎಂಟ್ರಿಯನ್ನು ಖಚಿತಪಡಿಸಿದ್ದಾರೆ. ಹಲವು ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡುತ್ತಿದ್ದ ಅವರು ಅಂತಿಮವಾಗಿ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ತಲೈವಾ, ಜನವರಿಯಲ್ಲಿ ಹೊಸ ಪಕ್ಷವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ 31ರಂದು ಆ ದಿನಾಂಕ ತಿಳಿಸುವುದಾಗಿಯೂ ಹೇಳಿದ್ದಾರೆ.
'ಮುಂಬರುವ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಬಹುದೊಡ್ಡ ಜಯ ದಾಖಲಿಸಲಿದ್ದೇವೆ. ತಮಿಳುನಾಡಿನಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕ ರಾಜಕಾರಣ ಹೊರಹೊಮ್ಮಲಿದೆ. ಯಾವುದೇ ಭ್ರಷ್ಟಾಚಾರ ಮತ್ತು ಜಾತಿ, ಧಾರ್ಮಿಕ ಪಕ್ಷಪಾತವಿಲ್ಲದ ರಾಜಕೀಯ ಬರಲಿದೆ' ಎಂಬ ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು 2021ರ ವಿಧಾನಸಭೆ ಚುನಾವಣೆ ಸ್ಪರ್ಧೆ ಕುರಿತು ನಿರ್ಧಾರ ಪ್ರಕಟಿಸಲೆಂದೇ ಮಕ್ಕಳ್ ಮಂದ್ರಂ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಕಾರ್ಯದರ್ಶಿಗಳ ಜೊತೆ ರಜಿನಿ ಮಾತುಕತೆ ನಡೆಸಿದ್ದರು.