ರಾಜಸ್ಥಾನ: ಸಾವನ್ನು ಸೋಲಿಸಿ ಕಲ್ಬೆಲಿಯಾವನ್ನು ಜಗತ್ತಿಗೆ ಪರಿಚಯಿಸಿದ ಗಟ್ಟಿಗಿತ್ತಿ ಈ ಗುಲಾಬೊ. ದೇಸಿ ನೃತ್ಯದಲ್ಲಿ ತಲ್ಲೀನರಾಗಿರುವುದನ್ನು ನೋಡೋದೆ ಕಣ್ಣಿಗೆ ಹಬ್ಬ. ಪುರುಷ ಪ್ರಧಾನ ಈ ಸಮಾಜದಲ್ಲಿ ಹೆಣ್ಣು ಮಗುವೆಂಬ ಕಾರಣಕ್ಕೆ ಚಿಕ್ಕವಳಾಗಿದ್ದಾಗಲೇ ಗುಲಾಬೊ ಕೊಲೆಗೆ ಯತ್ನ ನಡೆದಿತ್ತು. ಆದರೆ, ಅಸಮಾನತೆ ಮೆಟ್ಟಿ ನಿಂತ ಗುಲಾಬೊ ಈಗ ಮುಗಿಲೆತ್ತರಕ್ಕೆ ಬೆಳೆದಿದ್ದಾರೆ. ನರ್ತಕಿ ಗುಲಾಬೊ ಜೀವನ ನಿಜಕ್ಕೂ ಒಂದು ಸಾಹಸಗಾಥೆ.
ಗುಲಾಬೊ ಎಂಬುದು ತಂದೆ ಇಟ್ಟ ಹೆಸರು. ಗುಲಾಬೊ ಅಂದ್ರೆ ಗುಲಾಬಿ ಎಂದರ್ಥ. ಕಠಿಣ ಪರಿಶ್ರಮ, ದೃಢ ಸಂಕಲ್ಪದಿಂದ ಗುಲಾಬೊ ಇಂದು ತನ್ನ ಕಲೆಯ ಮೂಲಕ ಕಂಪು ಹರಡುತ್ತಿದ್ದಾಳೆ. ಛಲವೇ ಸಾಧನೆಯ ಜೀವಾಳ ಎಂಬುದನ್ನು ಇಂದಿನ ಯುವ ಪೀಳಿಗೆಗೆ ಸಾರಿ ಹೇಳುತ್ತಿದ್ದಾಳೆ.
ಗುಲಾಬೊ ನವೆಂಬರ್ 9, 1970ರಂದು ರಾಜಸ್ಥಾನದ ಅಜ್ಮೀರ್‌ನ ಕೊಟ್ಟಾದಲ್ಲಿ ಜನಿಸಿದರು. ಧನ್ವೇರಸ್ನಲ್ಲಿ ಜನಿಸಿದ ಕಾರಣ ಆರಂಭದಲ್ಲಿ ಧನ್ವಂತಿ ಎಂದು ಹೆಸರಿಡಲಾಗಿತ್ತು. ಆದರೆ, ನಂತರ ಸಂಪ್ರದಾಯವಾದಿ ಮನೋಭಾವದಿಂದಾಗಿ ಅವಳನ್ನು ಜೀವಂತವಾಗಿ ಸಮಾಧಿ ಮಾಡಲಾಯಿತು. ಇದನ್ನರಿತ ತಾಯಿ, ಮಗಳು ಗುಲಾಬೊಳನ್ನು ಹೊರ ತೆಗೆದು ಪ್ರಾಣ ಉಳಿಸಿದರು.
ಗುಲಾಬೊ ತಮ್ಮ ಬಾಲ್ಯವನ್ನು ಹಾವುಗಳೊಂದಿಗೆ ಕಳೆದರು. ಜೀವನೋಪಾಯಕ್ಕೆ ಸಂಪಾದನೆಗಾಗಿ ಗುಲಾಬೊ ಹಾವುಗಳೊಂದಿಗೆ ನರ್ತಿಸುತ್ತಿದ್ದರು. 1981ರಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದ ತೃಪ್ತಿ ಪಾಂಡೆ ಗುಲಾಬೊ ಅವರ ಪ್ರತಿಭೆ ಗುರುತಿಸಿ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಿದರು. ಬಳಿಕ ಗುಲಾಬೊ ಅವರ ಕಲೆಗೆ ಉತ್ತಮ ಅವಕಾಶಗಳು ದೊರೆತವು. ಹೀಗೆ ಕಲೆಯಲ್ಲೇ ಜೀವನ ಸಾಗಿಸಿದ ಗುಲಾಬೊ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.
1985ರಲ್ಲಿ ಯುಎಸ್‌ನಲ್ಲಿ ನರ್ತಿಸುವ ಮೂಲಕ ಮೊದಲ ಬಾರಿಗೆ ದೇಶದ ಆಚೆಗೆ ಗುಲಾಬೊ ತಮ್ಮ ಕಲೆ ಪ್ರದರ್ಶಿಸಿದರು. ಆಗಿನ್ನೂ ಬಾಲಕಿಯಾಗಿದ್ದ ಗುಲಾಬೊ ಯುಎಸ್‌ನಲ್ಲಿ ನೃತ್ಯ ಪ್ರದರ್ಶನ ನೀಡಿದರು. ಆದರೆ, ಹೊರ ದೇಶದಲ್ಲಿ ಮೊದಲ ಬಾರಿಗೆ ಕಲಾ ಪ್ರದರ್ಶನಕ್ಕೆ ತೆರಳುತ್ತಿದ್ದ ಗುಲಾಬೊ, ಅಮೆರಿಕಕ್ಕೆ ತೆರಳಲು ತಯಾರಿ ನಡೆಸುತ್ತಿದ್ದಾಗ ಅವರ ತಂದೆ ತೀರಿಕೊಂಡರು. ಆದರೆ, ಇದರಿಂದ ಕುಗ್ಗದ ಗುಲಾಬೊ ಅಮೆರಿಕಕ್ಕೆ ತೆರಳಿ ನೃತ್ಯ ಪ್ರದರ್ಶನ ನೀಡಿದರು. ಬಳಿಕ ಅವರ ಕಲಾ ಪ್ರಾವೀಣ್ಯತೆ ಮೆಚ್ಚಿದ ಅಮೆರಿಕ ಸರ್ಕಾರ, ಗುಲಾಬೊಗೆ ಯುಎಸ್ ಪೌರತ್ವ ನೀಡಿತು. ಅಲ್ಲದೇ ಅಲ್ಲಿನ ಜನರಿಗೆ ನೃತ್ಯ ಕಲಿಸಲು ಮನವಿ ಮಾಡಿತು. ಆದರೆ, ಅವರು ಅದನ್ನು ನಿರಾಕರಿಸಿ ಮತ್ತೆ ಭಾರತಕ್ಕೆ ಮರಳಿದರು. ಅಂದಿನ ಪ್ರಧಾನಿ ರಾಜೀವ್ ಗಾಂಧಿ, ಗುಲಾಬೊ ಅವರನ್ನು ಭೇಟಿಯಾದರು. ಈ ವೇಳೆ ಗುಲಾಬೊ, ರಾಜೀವ್ ಗಾಂಧಿ ಅವರಿಗೆ ರಾಖಿ ಕಟ್ಟಿದರು. ರಕ್ಷಾಬಂಧನದಿಂದ ಸಂತಸಗೊಂಡ ರಾಜೀವ್ ಗಾಂಧಿ ಗುಲಾಬೊರನ್ನು ಸಹೋದರಿ ಎಂದು ಕರೆದರು.
ಭಾರತದ ಬಿಗ್ ರಿಯಾಲಿಟಿ ಶೋ - ಬಿಗ್ ಬಾಸ್‌ನಲ್ಲಿ ಸಹ ಗುಲಾಬೊ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲ, ಜೈಪುರದ ರಸ್ತೆಗಳಲ್ಲಿ 15 ಕಿಲೋ ಮೀಟರ್ ನೃತ್ಯ ಮಾಡುವ ಮೂಲಕ ಸರ್ಕಾರವನ್ನು ವಿರೋಧಿಸಿದ್ದರು. ಇದರಿಂದ ಪ್ರಭಾವಿತಗೊಂಡ ಸರ್ಕಾರ ಕಲಾವಿದರ ಬೇಡಿಕೆಗಳನ್ನು ಈಡೇರಿಸಬೇಕಾಯಿತು. ಗುಲಾಬೊ ಅವರ ಜೀವನದ ತತ್ವ ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಿದೆ. ಚಿಕ್ಕಪುಟ್ಟ ಸೋಲಿಗೆ ಕುಗ್ಗುವ ಇಂದಿನ ಯುವಪೀಳಿಗೆಗೆ ಗುಲಾಬೊ ಜೀವನ ಸ್ಫೂರ್ತಿ.