ಜೈಪುರ: ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಮೊದಲು ದೆಹಲಿಯಲ್ಲಿ ಕೋವಿಡ್ -19 ಪಾಸಿಟಿವ್ ಎಂದು ಘೋಷಿಸಲ್ಪಟ್ಟ ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಅವರಿಗೆ ರಾಜಸ್ಥಾನದಲ್ಲಿ ಕೋವಿಡ್ -19 ಮಾದರಿಯ ಫಲಿತಾಂಶ ನೆಗೆಟಿವ್ ಬಂದಿದೆ.
ಇದು ನನ್ನ ಐದನೇ ಪರೀಕ್ಷೆ, ಈ ಬಾರಿ ಇದನ್ನು ಖಾಸಗಿ ಪ್ರಯೋಗಾಲಯದಲ್ಲಿ ಮಾಡಲಾಗಿದೆ. ಕೋವಿಡ್ -19 ನೆಗೆಟಿವ್ ಎಂದು ಪ್ರಮಾಣೀಕರಿಸಿದೆ. ಆದರೆ ದೆಹಲಿಯಲ್ಲಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಎಂದು ಘೋಷಿಸಲಾಗಿದೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸ್ಪಷ್ಟಪಡಿಸಬೇಕು ಎಂದು ಬೆನಿವಾಲ್ ಒತ್ತಾಯಿಸಿದ್ದಾರೆ.
‘ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೂ ನಾನು ಹೋಮ್ ಕ್ಯಾರಂಟೈನ್‌ನಲ್ಲಿ ಸಮಯ ಕಳೆಯುತ್ತಿರುವುದು ಬೇಸರದ ಸಂಗತಿ. ಜನರು ಎದುರಿಸುತ್ತಿರುವ ಸವಾಲುಗಳನ್ನು ಸಂಸತ್ತಿನಲ್ಲಿ ಎತ್ತಿ ಹಿಡಿಯಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಕೋವಿಡ್ ನೆಗೆಟಿವ್ ಎಂದು ಘೋಷಿಸಿದ ನನ್ನ ನಾಲ್ಕು ವರದಿಗಳ ಬಗ್ಗೆ ಐಸಿಎಂಆರ್ ನಿಲುವು ಏನು ಎಂದು ನಾನು ತಿಳಿದುಕೊಳ್ಳಬೇಕು ಮತ್ತು ಆರೋಗ್ಯ ಸಚಿವಾಲಯ ಇನ್ನೂ ಏಕೆ ಮೌನವಾಗಿದೆ’ ಎಂದು ಸಂಸದ ಬೆನಿವಾಲ್ ಪ್ರಶ್ನಿಸಿದ್ದಾರೆ.