ಜೋಧಪುರ್ (ರಾಜಸ್ಥಾನ): ತಾಯಿ ಮತ್ತು ಚಿಕ್ಕಪ್ಪ ಸೇರಿ 16 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಂದು ಸುಟ್ಟುಹಾಕಿರುವ ಶಂಕಿತ ಮರ್ಯಾದಾ ಹತ್ಯೆ ಪ್ರಕರಣವೊಂದು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ರಾಜಸ್ಥಾನದ ಪಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ತಾಯಿ ಸೀತಾ ದೇವಿ ಮತ್ತು ಚಿಕ್ಕ ಸವರಮ್ ಬಂಧಿತರು. ಹೂತಿಟ್ಟ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮಾರ್ಚ್ 19 ರಂದು ಈ ಘಟನೆ ನಡೆದಿದೆ. ಪೊಲೀಸ್ ಮಾಹಿತಿದಾರರ ಸಲಹೆ ಮೇರೆಗೆ ತಿಂಗಳಿಗೂ ಹೆಚ್ಚು ಕಾಲದ ನಂತರ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಹುಲ್ ಕೊಟೊಕಿ ತಿಳಿಸಿದ್ದಾರೆ.
ಅಷ್ಟಕ್ಕೂ ಏನಿದು ಪ್ರಕರಣ:
ಪಾಲಿ ಜಿಲ್ಲೆಯ ಸೋನಾಯ್ ಮಾಜ್ಹಿ ಗ್ರಾಮದ ರಿಂಕು ಶೇಷರಮ್ ಮತ್ತು ಸವರಮ್ ಅವರ ಕುಟುಂಬಗಳು ತುಂಬಾ ವರ್ಷಗಳ ಹಿಂದೆಯೇ ಪುಣೆಗೆ ಸ್ಥಳಾಂತರಗೊಂಡಿದ್ದು, ಅಲ್ಲಿ ಅವರು ಕಿರಾಣಿ ಅಂಗಡಿಯೊಂದನ್ನು ಹೊಂದಿದ್ದಾರೆ. ಸಂತ್ರಸ್ತೆ ರಿಂಕು ಶೇಷರಮ್ ಅವರ ಮಗಳು. ಆತನ ಮಗಳು ಪುಣೆಯಲ್ಲಿನ ಸ್ಥಳೀಯ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆಕೆ ಎರಡು ತಿಂಗಳ ಆತನ ಹಿಂದೆ ಓಡಿಹೋಗಿದ್ದಳು. ಬಾಲಕಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ರಿಂಕು ಅವರು ಪೊಲೀಸರಿಗೆ ದೂರು ನೀಡಿದ್ದರು.
ಓಡಿ ಹೋದ ಯುವಕ - ಯುವತಿಯನ್ನು ಪತ್ತೆ ಹಚ್ಚಲಾಯಿತು. ಯುವಕನನ್ನು ಬಂಧಿಸಿ, ಅಪ್ರಾಪ್ತ ಯುವತಿಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿತ್ತು. ಒಂದು ತಿಂಗಳ ನಂತರ ಯುವಕ ಜಾಮೀನಿನ ಮೇಲೆ ಹೊರ ಬಂದ. ನಂತರ ಮಗಳನ್ನು ಮದುವೆಯಾಗುವಂತೆ ರಿಂಕು ಆತನನ್ನು ಕೇಳಿದ್ದ. ಆದರೆ, ಆಕೆಯ ಕುಟುಂಬ ಸದಸ್ಯರು ಒಪ್ಪಿರಲಿಲ್ಲ. ಊರಿನಲ್ಲಿರುವ (ರಾಜಸ್ಥಾನ) ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಮಾರ್ಚ್ 18 ರಂದು ಆಕೆಯನ್ನು ತಾಯಿ ಮತ್ತು ಚಿಕ್ಕಪ್ಪ ಕರೆದೊಯ್ದರು ಎಂದು ಅವರು ಹೇಳಿದರು.
ಮರುದಿನ, ಮಾರ್ಚ್ 19ರಂದು, ತಾಯಿ ಮತ್ತು ಚಿಕ್ಕಪ್ಪ ಬಾಲಕಿಯನ್ನು ಕೊಂದು ಪುಣೆಗೆ ಮರಳಿ ಬಂದಿದ್ದರು. ಕುಟುಂಬದ ಇತರ ಸದಸ್ಯರನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಪ್ರಕರಣದ ಮಾಹಿತಿ ನೀಡಿದ್ದಾರೆ.