ಜೈಪುರ್(ರಾಜಸ್ಥಾನ): ರಾಜ್ಯಸಭಾ ಚುನಾವಣೆಗೆ ಮುನ್ನ ಬಿಜೆಪಿ ಪಕ್ಷ ತನ್ನ ಶಾಸಕರನ್ನು ಸೆಳೆಯಬಹುದು ಎಂಬುದನ್ನು ಅರಿತ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸುಮಾರು 100 ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರನ್ನೊಳಗೊಂಡ ತಂಡದೊಂದಿಗೆ ನಿನ್ನೆ ರಾತ್ರಿಯಿಡೀ ರೆಸಾರ್ಟ್‌ವೊಂದರಲ್ಲಿ ತಂಗಿದ್ದಾರೆ.
ಮುಂಬರಲಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಪಕ್ಷ ನಮ್ಮ ಶಾಸಕರನ್ನು ಬೇಟೆಯಾಡಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು. ಈ ಹಿನ್ನೆಲೆ ಪಕ್ಷದ ಶಾಸಕರನ್ನು ಕಾಯ್ದುಕೊಳ್ಳುವ ಸಲುವಾಗಿ ದೆಹಲಿ-ಜೈಪುರ ಹೆದ್ದಾರಿಯ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.
ಕಾಂಗ್ರೆಸ್ ಶಾಸಕರ ಮೇಲೆ ಬಿಜೆಪಿಗರು ಕಣ್ಣಿಟ್ಟಿದ್ದು, ಬೇಟೆಯಾಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಗೆಹ್ಲೋಟ್, ಸ್ವತಃ ತಾವೇ ರೆಸಾರ್ಟ್‌ನಲ್ಲಿನ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನುಳಿದಂತೆ ಕಾಂಗ್ರೆಸ್ಸಿನ ಎಂಟರಿಂದ ಹತ್ತು ಶಾಸಕರು ವೈಯಕ್ತಿಕ ಹಾಗೂ ಆರೋಗ್ಯ ಕಾರಣಗಳಿಂದಾಗಿ ನಿನ್ನೆ ರಾತ್ರಿ ರೆಸಾರ್ಟ್ಗೆ ಆಗಮಿಸದಿರುವವರು ಇಂದು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಉಳಿದ 100 ಶಾಸಕರು ನಿನ್ನೆ ರಾತ್ರಿಯಿಂದಲೇ ರೆಸಾರ್ಟ್‌ನಲ್ಲಿ ತಂಗಿದ್ದು, ಇಂದು ಸಹ ಇಲ್ಲೇ ಉಳಿದುಕೊಳ್ಳಲಿದ್ದಾರೆ ಎಂದು ರಾಜಸ್ಥಾನ ಸರ್ಕಾರದ ಮುಖ್ಯಸ್ಥ ಮಹೇಶ್ ಜೋಶಿ ಹೇಳಿದ್ದಾರೆ.
ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ನೀರಜ್ ದಂಗಿ ಅವರೊಂದಿಗೆ ಪಕ್ಷದ ಇತರ ಹಿರಿಯ ಮುಖಂಡರ ಸಮ್ಮುಖದಲ್ಲಿ ರೆಸಾರ್ಟ್‌ನಲ್ಲಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಮೂರು ರಾಜ್ಯಸಭಾ ಸ್ಥಾನಗಳಿಗೆ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.