ಜೈಪುರ (ರಾಜಸ್ಥಾನ): ಆಲ್ಕೋಹಾಲ್ ಕೈಗೆ ಉಜ್ಜುವುದರಿಂದ ಕೊರೊನಾ ವೈರಸ್ ಸತ್ತು ಹೋಗುವುದಾದರೆ ಅದನ್ನು ಸೇವಿಸುವುದರಿಂದ ದೇಹದಲ್ಲಿರುವ ವೈರಸ್ ಕೂಡಾ ನಾಶವಾಗಬಹುದು’ ಎಂದು ರಾಜಸ್ಥಾನದ ಶಾಸಕರೊಬ್ಬರು ವಿಚಿತ್ರ ವಾದವನ್ನು ಮುಂದಿಟ್ಟಿದ್ದಾರೆ.
ಸಾಂಗೋದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವರಾದ ಭರತ್ ಸಿಂಗ್ ಈ ರೀತಿಯ ವಾದ ಮುಂದಿಟ್ಟಿದ್ದಾರೆ. ಈ ಕುರಿತು ಸಿಎಂ ಅಶೋಕ್ ಗೆಹ್ಲೋಟ್ ಪತ್ರ ಬರೆದಿರುವ ಅವರು ರಾಜ್ಯದಲ್ಲಿ ಮದ್ಯದ ಅಂಗಡಿಗಳು ತೆರೆಯದ ಕಾರಣ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಉಲ್ಲೇಖಿಸಿದ್ದಾರೆ.
ಮದ್ಯವಿರುವ ಆಲ್ಕೋಹಾಲ್ ಕೈಗಳಿಗೆ ಉಜ್ಜುವುದರಿಂದ ವೈರಸ್ ಸಾಯುವುದಾದರೆ, ಅದನ್ನು ಕುಡಿಯುವವರ ದೇಹದಲ್ಲಿ ವೈರಸ್ ಸತ್ತು ಹೋಗಬಹುದು. ಇದು ಅಕ್ರಮ ಮದ್ಯ ಸೇವನೆಗಿಂತ ಬಹುಪಾಲು ಉತ್ತಮ ಎಂದು ಪತ್ರದಲ್ಲಿ ಬರೆದಿದ್ದಾರೆ.
ಆಲ್ಕೋಹಾಲ್ ಮೇಲಿರುವ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ ಈ ಮೂಲಕ ಹೆಚ್ಚಿನ ಆದಾಯ ಸಂಗ್ರಹಿಸಲು ಗುರಿ ನಿಗದಿಪಡಿಸಲಾಗಿದೆ. ಆದರೆ ಲಾಕ್‌ಡೌನ್ ಇದು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಮದ್ಯದ ಅಂಗಡಿಗಳ ತೆರವಿಗೆ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದು, ಇತ್ತೀಚೆಗೆ ಮದ್ಯ ಸಿಗದೇ ಸಾವನ್ನಪ್ಪಿರುವ ಪ್ರಕರಣಗಳನ್ನು ಕೂಡಾ ಉಲ್ಲೇಖಿಸಿದ್ದಾರೆ.