ಫ್ರಾನ್ಸ್: ರಫೇಲ್ ಯುದ್ಧ ವಿಮಾನಗಳಿಗೆ ಎಂಜಿನ್ ತಯಾರಿಸುವ ಸಫ್ರಾನ್ ಗ್ರೂಪ್ ಕಂಪನಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದಾರೆ. ಸಫ್ರಾಲ್ ಕಂಪನಿಯು ರಫೆಲ್ ಯುದ್ಧ ವಿಮಾನಗಳಿಗೆ ಹಲವಾರು ಪ್ರಮುಖ ಸಾಧನಗಳನ್ನು ಪೂರೈಸುವ ಕಂಪನಿಯಾಗಿದ್ದು, ರಫೆಲ್ನ ಕಾರ್ಯಕ್ಷಮತೆ, ದಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಪ್ರಮುಖ ಕೊಡುಗೆ ನೀಡುತ್ತಿದೆ.
ಇನ್ನು ರಾಜನಾಥ್ ಸಿಂಗ್ ಜೊತೆಗೆ ಫ್ರಾನ್ಸ್‌ನ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ಕೂಡ ತೆರಳಿದ್ದರು. ಈ ಸಂದರ್ಭದಲ್ಲಿ ಸಿಂಗ್, ರಫೇಲ್ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದಾರೆ.
ಇನ್ನು ಬಹುನಿರೀಕ್ಷಿತ ರಫೇಲ್ ಯುದ್ಧ ವಿಮಾನವನ್ನು ಭಾರತಕ್ಕೆ ಫ್ರಾನ್ಸ್ ಸರ್ಕಾರವು ಹಸ್ತಾಂತರಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಬಹು ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಚರ್ಚೆಯಾದ ನಂತರ ರಫೇಲ್ ಯುದ್ಧ ವಿಮಾನವನ್ನು ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ. ಫ್ಯಾರಿಸ್ನ ಮೆರಿಗ್ನಾಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಸಾಲ್ಟ್ ಕಂಪನಿ ಸಿಇಒ ಎರಿಕ್ ಟ್ರಾಪಿಯರ್ ರಫೇಲ್ ಯುದ್ಧ ವಿಮಾನವನ್ನು ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಾರತದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಫೇಲ್ ಯುದ್ಧ ವಿಮಾನ ಭಾರತೀಯ ವಾಯು ಪಡೆಯಲ್ಲಿ ಹೆಚ್ಚಿನ ಪ್ರಾಬಲ್ಯ ಮೆರೆಯಲಿದೆ ಎಂಬ ನಂಬಿಕೆ ಹೊಂದಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಉಭಯ ದೇಶಗಳ ನಡುವಿನ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.