ಫ್ಲೂ ಅಥವಾ ಕೋವಿಡ್?
ಭಾರತದಲ್ಲಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತವೆ. ಇತ್ತೀಚಿನ ದಿನಗಳಲ್ಲಿ, ಮೂಗು ಸೋರುವುದು, ಸೀನು ಅಥವಾ ಕೆಮ್ಮು ಬಂದರೆ ಜನರಲ್ಲಿ ಆತಂಕ ಶುರುವಾಗುತ್ತದೆ. ಸ್ವಲ್ಪ ಜ್ವರ ಕಾಣಿಸಿಕೊಂಡರೂ ಜನರಿಗೆ ಕೋವಿಡ್-19 ತಗುಲಿಬಿಟ್ಟಿದೆಯೇನೋ ಎಂಬಂತೆ ಭಾಸವಾಗುತ್ತದೆ. ಕೊರೊನಾ ತಪಾಸಣೆ ಮಾಡಿಸಿಕೊಳ್ಳಬೇಕೇ ಎಂದು ನಾವು ಯೋಚನೆ ಮಾಡುತ್ತೇವೆ. ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಮಧ್ಯೆಯೇ ದೇಶಕ್ಕೆ ಮುಂಗಾರು ಕಾಲಿಟ್ಟಿದೆ. ಇದರ ಜೊತೆಗೆ ಮಳೆಗಾಲದ ಸಾಂಕ್ರಾಮಿಕ ರೋಗಗಳೂ ಶುರುವಾಗುತ್ತವೆ. ಸಾಮಾನ್ಯ ಶೀತ ಮತ್ತು ಇನ್‌ಫ್ಲುಯೆಂಜಾ (ಫ್ಲೂ) ಕೂಡ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಈ ಹೊತ್ತಿನಲ್ಲಿ ಮೂಗು ಸೋರಲು ಆರಂಭವಾಗುತ್ತಿದ್ದಂತೆಯೇ ಜನರು ಹೆದರುವಂತಾಗಿದೆ. ಇವೆಲ್ಲವೂ ಒಂದೇ ರೀತಿಯ ಗುಣಲಕ್ಷಣಗಳಾಗಿವೆ. ಆದರೆ, ವೈದ್ಯಕೀಯ ಪರಿಣಿತರು ಹೇಳುವ ಪೈಕಿ ಕೋವಿಡ್-19 ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಫ್ಲೂ ಅಥವಾ ಕೊರೊನಾ ಎಂಬುದನ್ನು 3-4 ದಿನಗಳಲ್ಲಿ ಕಂಡುಕೊಳ್ಳಬಹುದು. ಆದರೆ ಹೆಚ್ಚು ರಿಸ್ಕ್ ಇರುವವರು, ಶೀತ ಅಥವಾ ಜ್ವರ ಕಂಡುಬರುತ್ತಿದ್ದಂತೆಯೇ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
ಶೀತವು ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಇದಕ್ಕೆ ರಿನೋ ವೈರಸ್‌ನಂತಹ ಹಲವು ಸಾಂಕ್ರಾಮಿಕ ವೈರಸ್‌ಗಳು ಕಾರಣವಾಗುತ್ತವೆ. ಆರಂಭಿಕ ಗುಣಲಕ್ಷಣಗಳು 5 ದಿನಗಳ ನಂತರ ಕಡಿಮೆಯಾಗುತ್ತವೆ. ಶೀತವನ್ನು ಯಾವ ಔಷಧವೂ ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ಈ ಸೋಂಕಿಗೆ ನಮ್ಮ ರೋಗನಿರೋಧಕ ಶಕ್ತಿಯೇ ಸಾಕಾಗುತ್ತದೆ.
ಇನ್‌ಫ್ಲುಯೆಂಜಾ ಅಥವಾ ಫ್ಲೂ ಇನ್ನೊಂದು ಶ್ವಾಸಕೋಶ ಸಮಸ್ಯೆಯಾಗಿದೆ. ವೈರಸ್ ತಗುಲಿದ 1 ರಿಂದ 4 ದಿನಗಳಲ್ಲಿ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಕಷ್ಟು ವಿಶ್ರಾಂತಿ ಮತ್ತು ದ್ರವಾಹಾರವು ಫ್ಲೂ ಇರುವ ಜನರಿಗೆ ಅನುಕೂಲಕರವಾಗಿರುತ್ತದೆ. ಅಂಗಡಿಯಿಂದ ತಂದುಕೊಂಡ ಔಷಧಗಳನ್ನು ಅತಿಯಾದ ಗುಣಲಕ್ಷಣಗಳನ್ನು ಹೊಂದಿರುವವರಿಗೆ ಸಲಹೆ ಮಾಡಲಾಗುತ್ತದೆ. ಅತಿ ಕಡಿಮೆ ಪ್ರಮಾಣದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಕೋವಿಡ್ 19 ಆಗಿದ್ದರೆ, ವೈರಸ್ ತಗುಲಿದ 1 ರಿಂದ 14 ದಿನಗಳಲ್ಲಿ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಲವು ಅಧ್ಯಯನಗಳ ಪ್ರಕಾರ, ಶೇ. 95ರಷ್ಟು ಕೋವಿಡ್ ರೋಗಿಗಳಲ್ಲಿ 11 ದಿನಗಳ ವೇಳೆಗೆ ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಶೇ. 85ರಷ್ಟು ಜನರಲ್ಲಿ ಗಂಭೀರ ಗುಣಲಕ್ಷಣಗಳು ಇರುವುದಿಲ್ಲ. ಉಳಿದ ಶೇ.15ರಷ್ಟು ರೋಗಿಗಳಿಗೆ ವೈದ್ಯಕೀಯ ನೆರವು ಬೇಕಾಗುತ್ತದೆ. ಈ ಶೇ.15ರಲ್ಲಿ ಶೇ.5ರಷ್ಟು ಜನರಿಗೆ ಐಸಿಯು ಅಥವಾ ಕ್ರಿಟಿಕಲ್ ಕೇರ್ ಅಗತ್ಯವಿರುತ್ತದೆ. ನೊವೆಲ್ ಕೊರೊನಾವೈರಸ್ ಶ್ವಾಸಕೋಶ ವ್ಯವಸ್ಥೆಯನ್ನು ಬಾಧಿಸುತ್ತದೆ. ಡಯಾಬಿಟೀಸ್ ಅಥವಾ ಕ್ಯಾನ್ಸರ್‌ನಂತಹ ಇತರೆ ರೋಗಗಳು ಇರುವ ಜನರಲ್ಲಿ ಮೊದಲೇ ಗುರ್ತಿಸಿ ಚಿಕಿತ್ಸೆ ನೀಡದೇ ಇದ್ದರೆ, ಸೋಂಕು ಮಾರಣಾಂತಿಕವಾಗಬಹುದು.
ಪರಿಣಿತ ವೈದ್ಯ ಡಾ. ಎಂ.ವಿ. ರಾವ್ ಪ್ರಕಾರ ಕೊರೊನಾ ಮತ್ತು ಫ್ಲೂ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿವೆ. ಫ್ಲೂ ಇದ್ದಾಗ ರೋಗಿಗಳಲ್ಲಿ 101 ಡಿಗ್ರಿವರೆಗೆ ಜ್ವರ ಕಾಣಿಸಿಕೊಳ್ಳಬಹುದು. ಆದರೆ ಕೊರೊನಾ ರೋಗಿಗಳಲ್ಲಿ ಇಷ್ಟು ತೀವ್ರತೆಯ ಜ್ವರ ಕಾಣಿಸಿಕೊಳ್ಳದಿರಬಹುದು. ಮುಂದುವರಿದು, ವಾಸನೆ ಮತ್ತು ರುಚಿ ತಿಳಿಯದೇ ಇರುವುದು ಕೋವಿಡ್ 19 ಆರಂಭಿಕ ಲಕ್ಷಣಗಳಲ್ಲಿ ಒಂದಾಗಿರಬಹುದು. ವಿಪರೀತ ಬಳಲಿದಂತೆ ರೋಗಿಗಳು ಕಾಣಿಸಿಕೊಳ್ಳುತ್ತಾರೆ. ಶ್ವಾಸಕೋಶ ಅಥವಾ ಹೃದಯ ರೋಗ, ಡಯಾಬಿಟೀಸ್, ಕ್ಯಾನ್ಸರ್ ಇರುವ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೊನಾ ರಿಸ್ಕ್ ಹೆಚ್ಚಿರುತ್ತದೆ. ಗುಣಲಕ್ಷಣಗಳು ಕಂಡುಬರುತ್ತಿದ್ದಂತೆಯೇ ಇವರು ವೈದ್ಯಕೀಯ ಸಹಾಯ ಪಡೆಯಬೇಕು.
ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಡಾ. ಜಿ ಶ್ರೀನಿವಾಸ ರಾವ್ ಹೇಳಿದಂತೆ, ತೆಲಂಗಾಣದಲ್ಲಿ ಪ್ರತಿ ತಿಂಗಳು 15,000 ಇಂದ 20,000 ಶ್ವಾಸಕೋಶ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಜೂನ್ ಮತ್ತು ಫೆಬ್ರವರಿ ಮಧ್ಯೆ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ಈ ಸನ್ನಿವೇಶವನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ. ಶ್ವಾಸಕೋಶ ಸಂಬಂಧಿ ಸೋಂಕು ಇರುವ ರೋಗಿಗಳ ವಿವರ ಸಂಗ್ರಹಿಸುವಲ್ಲಿ ಈಗಾಗಲೇ ಸಮುದಾಯ ಮತ್ತು ಕ್ಷೇತ್ರ ಮಟ್ಟದ ಕಾರ್ಯಕರ್ತರು ಕಾರ್ಯನಿರತರಾಗಿದ್ದಾರೆ. ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವುದರಿಂದ, ಮಾಸ್ಕ್‌ಗಳ ಬಳಕೆ ಹೆಚ್ಚಾಗಿದೆ. ಅಷ್ಟಕ್ಕೂ, ವಾಯುಜನಿತ ಅನಾರೋಗ್ಯ ಹರಡುವುದನ್ನು ಮಾಸ್ಕ್‌ಗಳು ತಡೆಯುತ್ತಿವೆ.