ನವದೆಹಲಿ: ಕಡಿಮೆ ಅವಧಿಯಲ್ಲಿ ಪ್ರಯಾಣಿಕರ ವೇಗದ ಸಂಚಾರದ ಗುರಿ ಹೊಂದಿರುವ ಭಾರತೀಯ ರೈಲ್ವೆ ಇಲಾಖೆಯು ಶೀಘ್ರದಲ್ಲೇ ದೆಹಲಿ-ಹೌರಾ ಹಾಗೂ ದೆಹಲಿ-ಮುಂಬೈ ಮಾರ್ಗಗಳಲ್ಲಿ ಗಂಟೆಗೆ 160 ಕಿಲೋಮೀಟರ್ ವೇಗವನ್ನು ಹೆಚ್ಚಿಸಲಿದೆ.
ದೆಹಲಿ-ಹೌರಾ ಮತ್ತು ದೆಹಲಿ-ಮುಂಬೈ ಮಾರ್ಗಗಳಿಗೆ 160 ಕಿ.ಮೀ ವೇಗದ ರೈಲುಗಳನ್ನು ಅಳವಡಿಸಲು ನಾವು ಯೋಜಿಸುತ್ತಿದ್ದೇವೆ. ಈ ಮಾರ್ಗಗಳು ಸಂಚಾರದ ಪರಿಗಣನೆಗೆ ಬಹುತೇಕ ಸಿದ್ಧವಾಗಿವೆ. ಹೀಗಾಗಿ ಈ ಹಣಕಾಸು ವರ್ಷದಲ್ಲಿ ನಾವು ಹೈಸ್ಪೀಡ್ ರೈಲುಗಳನ್ನು ಓಡಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ರೈಲ್ವೆ ಮಂಡಳಿಯ (ಸಿಗ್ನಲ್ ಮತ್ತು ಟೆಲಿಕಾಂ) ಸದಸ್ಯ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ದೆಹಲಿ-ಮುಂಬೈ, ದೆಹಲಿ-ಹೌರಾ ಹಾಗೂ ದೆಹಲಿ-ಚೆನ್ನೈ ಒಳಗೊಂಡ ಗೋಲ್ಡನ್ ಚತುರ್ಭುಜ ಮಾರ್ಗದಲ್ಲಿ ರೈಲ್ವೆಯು 130 ಕಿ.ಮೀ. ವೇಗದಲ್ಲಿ ಚಲಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೇ ಕಳೆದ ಕೆಲವು ವರ್ಷಗಳಿಂದ, ನಾವು ಎಲ್ಲಾ ಟ್ರ್ಯಾಕ್‌ಗಳು, ಸಿಗ್ನಲ್‌ಗಳು, ಬೋಗಿಗಳನ್ನು ಹಾಗೂ ಇತರೆ ಸೌಲಭ್ಯಗಳ ಜೊತೆಗೆ ನೂತನ ತಾಂತ್ರಿಕ ಪ್ರಯತ್ನಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಕೋವಿಡ್-19 ಬಿಕ್ಕಟ್ಟಿನಿಂದಾಗಿ ಪ್ರಯಾಣಿಕರ ಸೇವೆಗಳನ್ನು ಸ್ಥಗಿತಗೊಳಿಸಿರುವ ಭಾರತೀಯ ರೈಲ್ವೆ, ಟ್ರ್ಯಾಕ್ ದುರಸ್ತಿ ಮತ್ತು ಹಳೆಯ ಸೇತುವೆಗಳ ಮರು ನಿರ್ಮಾಣ, ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದೀಕರಣ ಸೇರಿದಂತೆ ಹಲವಾರು ಕಾರ್ಯಗಳ ಮೇಲೆ ಗಮನ ಹರಿಸಲಾಗಿದೆ ಎಂದು ಪ್ರದೀಪ್ ಕುಮಾರ್ ವಿವರಿಸಿದರು.