ವಯನಾಡು: ಪ್ರಧಾನಿ ಪಟ್ಟದ ಪ್ರಬಲ ಆಕಾಂಕ್ಷಿಯಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ದಕ್ಷಿಣ ಭಾರತದಲ್ಲಿ ಸ್ಪರ್ಧೆ ನಡೆಸಿ ಭರ್ಜರಿ ವಿಜಯ ಸಾಧಿಸಿದ್ದಾರೆ.
ದೇವರ ಸ್ವಂತ ನಾಡು ಎಂದೇ ಕರೆಸಿಕೊಳ್ಳುವ ಕೇರಳ ಬುದ್ಧಿವಂತ ಮತದಾರರನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯ. ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೇ ರಾಜ್ಯದ ಗಿರಿಶಿಖರಗಳ ಸುಂದರ ಪ್ರದೇಶ ವಯನಾಡಿನಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಎಡರಂಗದ ಪ್ರಾಬಲ್ಯದ ನಡುವೆ ಕೈ ಬಾವುಟವನ್ನು ಹಾರಿಸುವಲ್ಲಿ ರಾಹುಲ್ ಗಾಂಧಿ ಸಫಲರಾಗಿದ್ದಾರೆ.
ವಯನಾಡಿನಲ್ಲಿ ಈ ಹಿಂದಿನ ಎರಡೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಸಂಸತ್ ಪ್ರವೇಶಿಸಿತ್ತು. 2009 ಹಾಗೂ 2014ರಲ್ಲಿ ಎಂ.ಐ.ಶ್ರೀನಿವಾಸ್ ವಯನಾಡಿನಿಂದ ಆರಿಸಿ ಬಂದಿದ್ದರು. ಅಲ್ಪಸಂಖ್ಯಾತರ ಮತವೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ರಾಹುಲ್ ಗೆಲುವು ಸ್ಪರ್ಧೆಗೂ ಮುನ್ನವೇ ಬಹುತೇಕ ಖಚಿತವಾಗಿತ್ತು. ಆಂತರಿಕ ಸರ್ವೇ ನಡೆಸಿ ರಾಹುಲ್ ಗಾಂಧಿ ಕಣಕ್ಕಿಳಿದಿದ್ದರು. ರಾಗಾ ವಿರುದ್ಧ ಎನ್ಡಿಎ ಅಭ್ಯರ್ಥಿಯಾಗಿ ತುಷಾರ್ ವೆಲ್ಲಪಲ್ಲಿ ಸ್ಪರ್ಧಿಸಿದ್ದರು.
ರಾಹುಲ್ ಗಾಂಧಿ ವಯನಾಡಿನಲ್ಲಿ ಗೆಲುವು ಪಕ್ಷದ ವಿಚಾರದಲ್ಲಿ ಲಾಭ ಏನು ಎನ್ನುವ ಲೆಕ್ಕಾಚಾರಗಳೂ ಮುನ್ನೆಲೆಗೆ ಬಂದಿವೆ. ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಪ್ರಮುಖ ಅಜೆಂಡಾವನ್ನಿಟ್ಟುಕೊಂಡು ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರದಿಂದ ದಕ್ಷಿಣಕ್ಕೆ ಬಂದಿದ್ದರು. ಇದೀಗ ರಾಗಾ ವಯನಾಡಿನಲ್ಲಿ ಗೆದ್ದು ಬೀಗಿದ್ದು ಪಕ್ಷಕ್ಕೆ ಬೂಸ್ಟ್ ನೀಡಿದೆ.
ಮೂರು ಬಾರಿ ಅಮೇಠಿಯಲ್ಲಿ ಗೆದ್ದರೂ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸೋತಿರುವ ರಾಹುಲ್ ಗಾಂಧಿಗೆ ವಯನಾಡು ಕ್ಷೇತ್ರದ ಗೆಲುವಿನ ನಂತರದ ಹಾದಿ ಹೂವಿನ ಹಾಸಿಗೆಯಲ್ಲ. ಶೇ. 3.86ರಷ್ಟೇ ನಗರವಾಸಿಗಳನ್ನು ಹೊಂದಿರುವ ರಾಗಾ ಅವರ ನೂತನ ಕ್ಷೇತ್ರದಲ್ಲಿ ಇಲ್ಲಿನ ನಿವಾಸಿಗಳು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಕಾಳುಮೆಣಸು ಹಾಗೂ ಕಾಫಿ ಬೆಳೆಯೇ ಹೆಚ್ಚಿರುವ ವಯನಾಡಿನಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಪ್ರವಾಹದಲ್ಲಿ ಭಾರಿ ನಷ್ಟ ಉಂಟಾಗಿತ್ತು. ಜೊತೆಗೆ ಕಳೆದ ಕೆಲ ವರ್ಷಗಳಿಂದ ರೈತರ ಆತ್ಮಹತ್ಯೆಯ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇವೆಲ್ಲವನ್ನು ರಾಹುಲ್ ಗಾಂಧಿ ನಿಭಾಯಿಸಿ, ನೀಡಿರುವ ಭರವಸೆಯನ್ನು ಉಳಿಸಿಕೊಂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಾರಾ ಎನ್ನುವುದು ಮುಂದಿರುವ ಕುತೂಹಲ.