ಚಂಡೀಗಢ: ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಿದ ಕೃಷಿ ಕ್ಷೇತ್ರ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ಪಂಜಾಬ್‌ನಲ್ಲಿ "ಖೇತಿ ಬಚಾವೊ ಯಾತ್ರಾ" ( ಕೃಷಿ ಉಳಿಸಿ ಯಾತ್ರೆ) ಪ್ರಾರಂಭಿಸಲಿದ್ದಾರೆ.
ಈ ಯಾತ್ರೆಯ ಭಾಗವಾಗಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪಂಜಾಬ್‌ನಿಂದ ಈ ಯಾತ್ರೆ ಪ್ರಾರಂಭವಾಗಲಿದ್ದು, ನಂತರ ದೆಹಲಿಯನ್ನು ತಲುಪಲಿದೆ. ಆರಂಭದಲ್ಲಿ, ಟ್ರ್ಯಾಕ್ಟರ್ಗಳನ್ನು ಬಳಸಿಕೊಂಡು ಱಲಿಗಳು ಮತ್ತು ರೋಡ್ ಶೋಗಳನ್ನು ನಡೆಸುವ ಮೂಲಕ ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೊಗಾ ಜಿಲ್ಲೆಯ ಬಾದ್ನಿ ಕಲನ್ನಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡಲಿದ್ದು, ಇಲ್ಲಿಂದ ರಾಹುಲ್ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಲಿದ್ದಾರೆ. ನಂತರ ಈ "ಟ್ರ್ಯಾಕ್ಟರ್ ಯಾತ್ರೆ" ಬದ್ನಿ ಕಲನ್ ನಿಂದ ಲುಧಿಯಾನದ ಜತ್ಪುರ ತಲುಪಲಿದೆ. ಬಳಿಕ ಜತ್ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.
ಸಂಸತ್ತು ಅಂಗೀಕರಿಸಿದ ಕೃಷಿ ತಿದ್ದುಪಡಿ ಕಾನೂನುಗಳನ್ನು ಕಾಂಗ್ರೆಸ್ ರೈತ ವಿರೋಧಿ ಎಂದು ಕರೆದಿದೆ. ರೈತರಿಗೆ ಈ ಕುರಿತು ಜಾಗೃತಿ ಮೂಡಿಸಲು ಪಕ್ಷವು ದೇಶಾದ್ಯಂತ ಒಂದು ತಿಂಗಳ ಕಾಲ ಆಂದೋಲನ ನಡೆಸಲು ಉದ್ದೇಶಿಸಿದೆ. ಈಗಾಗಲೇ ಸೆಪ್ಟೆಂಬರ್ 24 ರಂದು ಕೆಲವು ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಅವುಗಳನ್ನು ನವೆಂಬರ್ 14 ರಂದು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ದೇಶದ ಮೂಲೆ-ಮೂಲೆಯ ಸುಮಾರು ಎರಡು ಕೋಟಿ ಅನ್ನದಾತರ ಜ್ಞಾಪಕ ಪತ್ರ ಮತ್ತು ಸಹಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಹಸ್ತಾಂತರಿಸುವ ಮೂಲಕ ಪ್ರತಿಭಟನೆಯನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ.