ನವದೆಹಲಿ: ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹೂಸ್ಟನ್ನಲ್ಲಿನ 'ಹೌಡಿ ಮೋದಿ' ಸಮಾವೇಶದಲ್ಲಿ 'ಅಬ್ ಕೀ ಬಾರ್ ಟ್ರಂಪ್ ಸರ್ಕಾರ್' ಎಂದು ಹೇಳಿದ್ದರು. ಈ ಬಗ್ಗೆ ಕಾಂಗ್ರೆಸ್ ವಿರೋಧ ಪಡಿಸಿದಾಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸ್ಪಷ್ಟನೆ ನೀಡಿದ್ದರು.
ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರು ಜೈಶಂಕರ್ ಅವರ ಸ್ಪಷ್ಟನೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. ನಮ್ಮ ಪ್ರಧಾನಿ ಅವರ ಅಸಮರ್ಥತೆಯನ್ನು ಮರೆಮಾಚಿದ್ದಕ್ಕಾಗಿ ಜೈಶಂಕರ್ ಅವರಿಗೆ ಧನ್ಯವಾದಗಳು. ಅವರ ಹೇಳಿಕೆಯು ಪ್ರಜಾಪ್ರಭುತ್ವ ರಾಷ್ಟ್ರ ಭಾರತಕ್ಕೆ ಗಂಭೀರ ಸಮಸ್ಯೆಯನ್ನುಂಟು ಮಾಡಲಿತ್ತು. ನಿಮ್ಮ ಮಧ್ಯಸ್ಥಿಕೆಯಿಂದ ಅದು ದೂರಾಗಲಿ ಎಂದು ನಾನು ಭಾವಿಸುತ್ತೇನೆ. ನೀವು ಅವರೊಂದಿಗೆ ಇರುವಾಗ ರಾಜತಾಂತ್ರಿಕತೆಯ ಬಗ್ಗೆ ಅವರಿಗೂ ಸ್ವಲ್ಪ ಕಲಿಸಿ ಎಂದು ಬರೆದುಕೊಂಡಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರು ಹೂಸ್ಟನ್ ಸಮಾವೇಶದಲ್ಲಿ 'ಅಬ್ ಕೀ ಬಾರ್ ಟ್ರಂಪ್ ಸರ್ಕಾರ್' ಎಂಬ ಮಾತನ್ನು ಬಳಸಿದ್ದು, ಅಮೆರಿಕ ಅಧ್ಯಕ್ಷರು ತಮ್ಮ ಈ ಹಿಂದಿನ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಬಳಸಿದ್ದನ್ನು ಅವರು ಕೇವಲ ಉಲ್ಲೇಖಿಸಿದ್ದಾರೆ ಎಂದು ಜೈಶಂಕರ್ ಸ್ಪಷ್ಟನೆ ನೀಡಿದ್ದರು.