ಚಂಡೀಗಢ(ಪಂಜಾಬ್): ಪಂಜಾಬ್ನಲ್ಲಿ ನಡೆದ ಹೂಚ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಮತ್ತೆ 12 ಮಂದಿಯನ್ನು ವಶಕ್ಕೆ ಪಡೆದು ಪಂಜಾಬ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದರ ಜೊತೆಗೆ ಮೂರು ಡ್ರಮ್ಗಳಷ್ಟು ಕಳ್ಳಭಟ್ಟಿ ಪೂರೈಸಿದ್ದ, ಲುದಿಯಾನ ಮೂಲದ ಪೇಂಟ್ ವ್ಯಾಪಾರ ಮಾಡುತ್ತಿದ್ದ ಉದ್ಯಮಿಯನ್ನು ಸೆರೆ ಹಿಡಿಯಲು ಪಂಜಾಬ್ ಪೊಲೀಸರು ಯೋಜನೆ ರೂಪಿಸಿದ್ದಾರೆ.
ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗಾಗಲೇ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿನಾರ್ ಗುಪ್ತಾ ಅವರಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಸಂಪೂರ್ಣ ಅಧಿಕಾರ ನೀಡಿ, ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಈಗ 12 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಇವರಲ್ಲಿ 6 ಮಂದಿ ಪೊಲೀಸರು ಹಾಗೂ 7 ಮಂದಿ ಅಬಕಾರಿ ಮತ್ತು ತೆರಿಗೆ ಅಧಿಕಾರಿಗಳ ವಿರುದ್ಧವೂ ತನಿಖೆಗೆ ಆದೇಶ ನೀಡಲಾಗಿದೆ.
ಪಂಜಾಬ್ನ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಅಕ್ರಮ ಮದ್ಯ ದಂಧೆಯಲ್ಲಿ ಐವರು ಕಿಂಗ್ಪಿನ್ಗಳಿದ್ದು, ಲುದಿಯಾನಾದ ರಾಜೇಶ್ ಜೋಷಿ ಸೇರಿ 8 ಮಂದಿ ಆರೋಪಿಗಳ ಸೆರೆಗೆ ಬಲೆ ಬೀಸಲಾಗಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಾವಿನ ಸಂಖ್ಯೆ 108ಕ್ಕೆ ಏರಿದ್ದು, ತಾರ್ನ್ ತರನ್ನಲ್ಲಿ 82 ಮತ್ತು ಅಮೃತಸರ್ ಮತ್ತು ಬಟಾಲಾದಲ್ಲಿ ತಲಾ 13 ಸಾವುಗಳು ಸಂಭವಿಸಿವೆ. ಲುದಿಯಾನಾ ಪೊಲೀಸರು ಅಕ್ರಮ ಮದ್ಯ ಉತ್ಪಾದನಾ ದಂಧೆಯನ್ನು ಪತ್ತೆ ಹಚ್ಚಿ 2 ಲಕ್ಷ ಲೀಟರ್ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪಂಜಾಬ್ ಸಿಎಂ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.