ಕೆವಾಡಿಯಾ (ಗುಜರಾತ್): ಕಳೆದ ವರ್ಷ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ಸತ್ಯವನ್ನು ಪಾಕಿಸ್ತಾನ ಸಂಸತ್ತು ಒಪ್ಪಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಏಕತಾ ದಿನದ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, "ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಧೈರ್ಯಶಾಲಿ ಸೈನಿಕರ ಸಾವಿಗೆ ಇಡೀ ರಾಷ್ಟ್ರವೇ ಶೋಕಿಸುತ್ತಿದ್ದಾಗ, ಕೆಲವರು ಲಾಭಕ್ಕಾಗಿ 'ಕೊಳಕು ರಾಜಕೀಯ'ದಲ್ಲಿ ತೊಡಗಿದ್ದರು" ಎಂದರು.
ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ತಮ್ಮ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಚರ್ಚೆಯ ವೇಳೆ ಪುಲ್ವಾಮಾ ದಾಳಿಯಲ್ಲಿ ತಮ್ಮ ದೇಶದ ಪಾತ್ರವನ್ನು ಒಪ್ಪಿಕೊಂಡ ನಂತರ ಮೋದಿ ಈ ಹೇಳಿಕೆ ನೀಡಿದ್ದಾರೆ.
"ಪುಲ್ವಾಮಾ ದಾಳಿಯ ನಂತರ ಹೊರಬಂದ ಅನಗತ್ಯ ಹೇಳಿಕೆಗಳನ್ನು ದೇಶವು ಮರೆಯಲು ಸಾಧ್ಯವಿಲ್ಲ. ದೇಶವು ಅಪಾರ ನೋವಿನಿಂದ ಬಳಲುತ್ತಿರುವಾಗ ಸ್ವಾರ್ಥ ಮತ್ತು ದುರಹಂಕಾರ ಉತ್ತುಂಗಕ್ಕೇರಿತು" ಎಂದು ಮೋದಿ ಹೇಳಿದ್ದಾರೆ. "ನಮ್ಮ ಪಕ್ಕದ ದೇಶದ ಸಂಸತ್ತಿನಲ್ಲಿ ಸತ್ಯವನ್ನು ಅಂಗೀಕರಿಸಿದ ನಂತರ ಅಂತಹ ಜನರ ನೈಜ ಮುಖ ಬಹಿರಂಗವಾಗಿದೆ" ಎಂದಿದ್ದಾರೆ.
"ಪುಲ್ವಾಮಾ ದಾಳಿಯ ನಂತರ ಮಾಡಿದ ರಾಜಕೀಯವು ಜನರು ತಮ್ಮ ರಾಜಕೀಯ ಲಾಭಕ್ಕಾಗಿ ಯಾವುದೇ ಮಿತಿಯನ್ನೂ ಮೀರುತ್ತಾರೆ ಎಂದು ತೋರಿಸುತ್ತದೆ. ಈ ರೀತಿಯ ರಾಜಕೀಯದಲ್ಲಿ ಪಾಲ್ಗೊಳ್ಳದಂತೆ ರಾಜಕೀಯ ಪಕ್ಷಗಳನ್ನು ಒತ್ತಾಯಿಸಲು ಬಯಸುತ್ತೇನೆ, ಅದು ನಮ್ಮ ಭದ್ರತಾ ಪಡೆಗಳ ಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದಾರೆ.