ನವದೆಹಲಿ: ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂದು ದೆಹಲಿಯ ಜಂತರ್ ಮಂತರ್ನಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು.
ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಿವಿಧ ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರಕರಣದಲ್ಲಿ ಯುಪಿ ಯೋಗಿ ಆದಿತ್ಯನಾಥ್ ಸರ್ಕಾರ ಹಾಗೂ ಪೊಲೀಸರ ನಡೆ ಬಗ್ಗೆ ಪ್ರತಿಭಟನಾಕಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು. ಆರಂಭದಲ್ಲಿ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಅಲ್ಲಿ ಸೆಕ್ಷನ್ 144 ಜಾರಿ ಇರುವ ಕಾರಣ ಪ್ರತಿಭಟನೆಯನ್ನ ಜಂತರ್ ಮಂತರ್ ಬಳಿ ಆಯೋಜಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್, ಪೊಲೀಸರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದು, ಇಂಡಿಯಾ ಗೇಟ್ ಬಳಿ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದಿರುವ ಅವರು ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದಿದ್ದಾರೆ. ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ದೆಹಲಿ ಸಿಎಂ ಕೇಜ್ರಿವಾಲ್ ಭಾಗಿ
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಬಾರದು. ಇಂತಹ ಘಟನೆಗಳು ಯುಪಿ, ಮಧ್ಯಪ್ರದೇಶ, ರಾಜಸ್ಥಾನ, ಮುಂಬೈ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವುದು ಯಾಕೆ!? ದೇಶದಲ್ಲಿ ಯಾವುದೇ ಅತ್ಯಾಚಾರ ಪ್ರಕರಣ ನಡೆಯಬಾರದು ಎಂದರು. ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ದೇಶದ ಜನರು ಭಯಸಿದ್ದಾರೆ. ಸಂತ್ರಸ್ತೆ ಕುಟುಂಬಕ್ಕೆ ಸದ್ಯ ಸಹಾಯಹಸ್ತ ನೀಡಬೇಕಾಗಿದೆ. ಆರೋಪಿಗಳನ್ನ ಗಲ್ಲಿಗೇರಿಸಬೇಕೆಂದು ಇದೇ ವೇಳೆ, ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಮುಖ್ಯಸ್ಥ ಡಿ ರಾಜಾ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿರುವ ಯೆಚೂರಿ ಯುಪಿ ಸರ್ಕಾರ ಆಡಳಿತದಲ್ಲಿರುವ ಯಾವುದೇ ಅರ್ಹತೆ ಪಡೆದುಕೊಂಡಿಲ್ಲ. ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಎಂದಿದ್ದಾರೆ.