ಲಖನೌ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ವಾರಣಾಸಿಯ ನೇಕಾರರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ನೇಕಾರರು ಹೆಚ್ಚಿದ ವಿದ್ಯುತ್ ದರ ಮತ್ತು ಆಗಾಗ್ಗೆ ವಿದ್ಯುತ್ ಅಡೆತಡೆಗಳ ಬಗ್ಗೆ ಪ್ರಿಯಾಂಕಾ ಗಾಂಧಿ ಬಳಿ ಸಮಸ್ಯೆ ತೋಡಿಕೊಂಡರು. ಲಾಕ್ಡೌನ್ ಸಮಯದಲ್ಲಿ ವ್ಯವಹಾರವು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಹಲವರು ತಮ್ಮ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಲ್ಲ. ಸರ್ಕಾರ ನಮಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಅಳಲು ತೋಡಿಕೊಂಡರು.
ಸಮಸ್ಯೆ ಆಲಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ನೇಕಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವುದಾಗಿ ಭರವಸೆ ನೀಡಿದರು ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲೂ ಸಹಾಯ ಮಾಡುವುದಾಗಿ ತಿಳಿಸಿದರು.