ವಾರಣಾಸಿ: ಸೋನಭದ್ರಾ ಗುಂಡಿನ ದಾಳಿ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರನ್ನು ಭೇಟಿ ಮಾಡಲು ಹೊರಟಿದ್ದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭೂವಿವಾದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಸೋನಭದ್ರಾ ಜಿಲ್ಲೆಯ ಘೋರಾವಾಲ್ನ ಉಬಾ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ನಡೆದಿತ್ತು. ಮೂವರು ಮಹಿಳೆಯರು ಸೇರಿದಂತೆ 10 ಮಂದಿಯನ್ನು ಕೊಲ್ಲಲಾಗಿತ್ತು. ಇನ್ನು ಸೋನಭದ್ರಕ್ಕೆ ಪ್ರಿಯಾಂಕಾ ಗಾಂಧಿ ತೆರಳುತ್ತಿದ್ದ ವೇಳೆ ಅವರಿಗೆ ತಡೆಯಲಾಗಿದ್ದು, ನಾರಾಯಣಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ, ನಾನು ಮೃತರ ಕುಟುಂಬದವರನ್ನು ಭೇಟಿ ಮಾಡಲು ಹೊರಟಿದ್ದೆ. ನನ್ನ ಜೊತೆ ಕೇವಲ ನಾಲ್ವರನ್ನು ಕರೆದುಕೊಂಡು ಹೋಗುತ್ತೇನೆ ಎಂದರೂ ಕೂಡ ಅವಕಾಶ ನೀಡುತ್ತಿಲ್ಲ. ಯಾಕೆ ನಮ್ಮನ್ನು ತಡೆಯಲಾಗುತ್ತಿದೆ ಎಂಬುದಕ್ಕೆ ಕಾರಣ ನೀಡಬೇಕು. ನನ್ನನ್ನು ಯಾಕೆ ವಶಕ್ಕೆ ಪಡೆಯಲಾಗಿದೆ, ನಾವು ಎಲ್ಲಿಗೆ ಬೇಕಾದರೂ ಹೋಗಲು ಸಿದ್ದ ಎಂದರು.
ಇನ್ನು ಸೋನಭದ್ರಾದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.