ನವದೆಹಲಿ: ಕಬ್ಬಿನ ಬಾಕಿ ಮೊತ್ತ ಪಾವತಿಯಾಗದ ಹಿನ್ನೆಲೆ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೂರ್ವ ಉತ್ತರ ಪ್ರದೇಶ ಭಾಗದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಸರಣಿ ಟ್ವೀಟ್ ಮಾಡಿ, ಮುಜಾಫರ್ನಗರದ ರೈತ ತಮ್ಮ ಹೊಲದಲ್ಲಿ ಕಬ್ಬಿನ ಬೆಳೆ ಒಣಗುತ್ತಿರುವುದನ್ನು ನೋಡಿ ಸಹಿಸಲಾಗದೇ ಅತ್ತ ಯಾವುದೇ ಪರಿಹಾರ ಧನ ಸಿಗದಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಜೆಪಿ 14 ದಿನಗಳಲ್ಲಿ ಪೂರ್ತಿ ಹಣ ಪಾವತಿ ಮಾಡಲಾಗುವುದು ಎಂಬ ಭರವಸೆ ನೀಡಿತ್ತು. ಆದರೆ, ಸಕ್ಕರೆ ಕಾರ್ಖಾನೆಗಳು ಸಾವಿರಾರು ಕೋಟಿ ರೂಪಾಯಿ ಪಾವತಿ ಬಾಕಿ ಉಳಿಸಿಕೊಂಡು ಮುಚ್ಚಿಹೋಗಿವೆ.
ಮುಜಾಫರ್ನಗರದ ಕಬ್ಬು ರೈತನ ಆತ್ಮಹತ್ಯೆ ಸುದ್ದಿಯನ್ನು ಪ್ರಿಯಾಂಕ ಗಾಂಧಿ ತನ್ನ ಟ್ವೀಟ್ ನಲ್ಲಿ ಲಗತ್ತಿಸಿ ಬರೆದುಕೊಂಡಿದ್ದಾರೆ. " ಕಬ್ಬಿನ ಕೃಷಿಕರು ತಮ್ಮ ಬಾಕಿ ಹಣವನ್ನು ಪಡೆಯದೇ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕುವ ಸಂದರ್ಭ ಹೇಗಿರುತ್ತದೆ ಎಂದು ಅವರ ಸ್ಥಾನದಲ್ಲಿ ನಿಂತು ಯೋಚಿಸಿ ಎಂದು ನಾನು ಕೂಡ ಎರಡು ದಿನಗಳ ಹಿಂದೆ ಸರ್ಕಾರಕ್ಕೆ ತಿಳಿಸಿ, ಹಣ ಪಾವತಿಸುವಂತೆ ಮಾಡಲು ಒತ್ತಾಯಿಸಿದ್ದೆ. ಆದರೆ, ಬಿಜೆಪಿ ಸರ್ಕಾರವು ಕಬ್ಬಿನ ಪಾವತಿಯ ಬಗ್ಗೆ ಭರವಸೆ ನೀಡಿದ್ದ 14 ದಿನಗಳಲ್ಲಿ ಎಲ್ಲೂ ಉಲ್ಲೇಖಿಸಿಲ್ಲ." ಎನ್ನತ್ತಾರೆ ಪ್ರಿಯಾಂಕ.