ಬೆಂಗಳೂರು: ವಿಕಾಸಸೌಧದಲ್ಲಿ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ಮುಂದುವರೆಸುವುದಕ್ಕೆ ಮುಂದಾಗಿದ್ದು, ಸಾರಿಗೆ ಸಿಬ್ಬಂದಿಗೆ ಖಾಸಗಿ ಬಸ್ ಮಾಲೀಕರ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
ದಿನಗೂಲಿ ಕಾರ್ಮಿಕರು, ಕಾರ್ಮಿಕರಿಗೆ ತೊಂದರೆ ತಪ್ಪಿಸಲು ಬೆಳಗ್ಗೆ ಹಾಗೂ ಸಂಜೆ ಎರಡು ಗಂಟೆಗಳ ಕಾಲ ಮಾತ್ರ ಖಾಸಗಿ ಬಸ್ಗಳು ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ. ಸದ್ಯಕ್ಕೆ ಸರ್ಕಾರ ಹಾಗೂ ಸಾರಿಗೆ ನೌಕರರ ಹಗ್ಗಜಗ್ಗಾಟಕ್ಕೆ ಪ್ರಯಾಣಿಕರು ಹೈರಾಣಾಗಿದ್ದಾರೆ.
ಸಂಧಾನ ವಿಫಲವಾದ ಕುರಿತಂತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದು, ಖಾಸಗಿ ಬಸ್ಗಳೂ ಕೂಡಾ ಸಂಚರಿಸುವುದಿಲ್ಲ ಎಂಬ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ನೌಕರರ ಸಂಘದ ಮುಖಂಡರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ: ಸಿಎಂ
ಖಾಸಗಿ ಬಸ್ಗಳ ಮಾಲೀಕರು ನಮ್ಮ ಹೋರಾಟಕ್ಕೆ ಬೆಂಬಲ ನೀಡಿರುವುದು ನಮಗೆ ಬಲ ತಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದೇ ವೇಳೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಒಕ್ಕೂಟ ಅಧ್ಯಕ್ಷ ನಟರಾಜ್ ಶರ್ಮಾ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ಸಾರಿಗೆ ಸಚಿವರ ಪ್ರತಿಷ್ಠೆಯಾಗಿ ತೆಗೆದುಕೊಂಡ ಪರಿಣಾಮ ಹೋರಾಟ ಈ ಹಂತ ತಲುಪಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ನಾಳೆಯಿಂದ ಬೆಳಗ್ಗೆ ಹಾಗೂ ಸಂಜೆ ಎರಡು ಗಂಟೆಗಳ ಕಾಲ ಬಸ್ ಖಾಸಗಿ ಬಸ್ ಸಂಚಾರ ನಡೆಸುತ್ತೇವೆ ನಟರಾಜ್ ಶರ್ಮಾ ಮಾಹಿತಿ ನೀಡಿದರು.