ನವದೆಹಲಿ: ನಿನ್ನೆಯಿಂದ ರಾಜ್ಯಸಭೆಯ 250ನೇ ಅಧಿವೇಶನ ಆರಂಭಗೊಂಡಿದ್ದು, ಅದರಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ನ್ಯಾಷನಲ್ ಕಾಂಗ್ರೆಸ್ ಹಾಗೂ ಬಿಜೆಡಿ ಹಾಡಿ ಹೊಗಳಿದ್ದಾರೆ.
ಭಾಷಣ ಮಾಡುತ್ತಿದ್ದ ವೇಳೆ ಎರಡು ಪಕ್ಷಗಳು ಯಾವುದೇ ಕಾರಣಕ್ಕೂ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿಲ್ಲ ಎಂದ ಅವರು, ಶರದ್ ಪವಾರ್ ನೇತೃತ್ವದ ಎನ್ಸಿಪಿ ಹಾಗೂ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಪಕ್ಷಗಳನ್ನ ಪ್ರಶಂಸಿದ್ದಾರೆ.
ಅಧಿವೇಶನ ನಡೆಯುತ್ತಿದ್ದ ವೇಳೆ ಈ ಎರಡು ಪಕ್ಷಗಳು ಬಹಳಷ್ಟು ಶಿಸ್ತಿನಿಂದ ನಡೆದುಕೊಂಡಿವೆ. ಸಂಸತ್ತಿನ ನಿಯಮ ಅದ್ಭುತವಾಗಿ ಪಾಲಿಸಿವೆ. ಅವರ ಮನವರಿಕೆ ನಿಜಕ್ಕೂ ತುಂಬಾ ಪರಿಣಾಮಕಾರಿಯಾಗಿದ್ದು, ನಮ್ಮ ಪಕ್ಷ ಸೇರಿದಂತೆ ಎಲ್ಲ ಪಕ್ಷ ಆ ಶಿಸ್ತು ಕಲಿತುಕೊಳ್ಳಬೇಕು ಎಂದು ತಿಳಿಸಿದರು.
ಸಭೆ ನಡೆಯುತ್ತಿದ್ದಾಗ ಧರಣಿ ನಡೆಸದೇ ಈ ಮೂಲಕ ಪರಿಣಾಮಕಾರಿಯಾಗಿ ಜನರ ಹೃದಯ ಗೆಲ್ಲಬಹುದು ಎಂದು ಆ ಪಕ್ಷಗಳು ನಮಗೆ ತೋರಿಸಿಕೊಟ್ಟಿವೆ. ಅವರ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಇನ್ನು ಈಗಾಗಲೇ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಂದು 20 ದಿನ ಕಳೆದು ಹೋಗಿದ್ದು, ಇಲ್ಲಿಯವರೆಗೆ ಸರ್ಕಾರ ರಚನೆಯಾಗಿಲ್ಲ. ಶಿವಸೇನೆ ಆಗಲೇ ಬಿಜೆಪಿಯಿಂದ ಹೊರಬಂದು ಎನ್ಸಿಪಿ+ಕಾಂಗ್ರೆಸ್ ಜತೆ ಸೇರಿ ಮೈತ್ರಿ ಮಾಡಿಕೊಳ್ಳುವ ಯೋಜನೆ ಹಾಕಿಕೊಳ್ಳುತ್ತಿದ್ದು, ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.