ನವದೆಹಲಿ: ಇದೇ ಮೊದಲ ಬಾರಿಗೆ ಜಿ-20 ಶೃಂಗದ ಪ್ರಮುಖ ನಾಯಕರು ಮತ್ತು ಡಬ್ಲ್ಯೂಎಚ್‌ಒ, ಯುಎನ್, ಐಎಂಎಫ್ ಮತ್ತು ವಿಶ್ವಬ್ಯಾಂಕ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖಂಡರು ವಿಡಿಯೋ ಕಾನ್ಫರೆನ್ಸ್ ಮೂಲಕ 90 ನಿಮಿಷಗಳ ಸಭೆ ನಡೆಸಿದರು.
ಜಾಗತೀಕರಣಕ್ಕೆ ಮಾನವೀಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವಿಶಿಷ್ಟ ಜಿ-20 ಶೃಂಗವನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವರುಗಳು ಮತ್ತು ಕೇಂದ್ರೀಯ ಬ್ಯಾಂಕ್‌ನ ಗವರ್ನರುಗಳು ಮತ್ತು ಜಿ-20 ಶೆರ್ಪಾಗಳ ಸಭೆ ಮಾಡಲಾಗಿತ್ತು.
2008 ರ ಆರ್ಥಿಕ ವಿಪತ್ತನ್ನು ನಿವಾರಿಸಲು ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಕೈಜೋಡಿಸಿದ್ದ ದೇಶಗಳು ನಂತರ ಕೇವಲ ಆರ್ಥಿಕ ರಾಜಕೀಯ ವಿಚಾರಗಳಿಗಷ್ಟೇ ಸೀಮಿತವಾಗಿರಲಿಲ್ಲ. ಈಗ ಇದು ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸವಾಲಿನ ಕುರಿತೂ ಚರ್ಚೆ ನಡೆಸುವಂತಾಗಿದೆ. ಗುಪ್ತ ಸಭೆಯ ಬಗ್ಗೆ ವರದಿ ಮಾಡಿದ ಮೂಲಗಳ ಪ್ರಕಾರ, 2008ರ ಆರ್ಥಿಕ ವಿಪತ್ತಿನ ನಂತರ ಜಿ-20 ಕೇವಲ ಆರ್ಥಿಕ ಅಜೆಂಡಾದ ಮೇಲೆ ಗಮನ ಹರಿಸಿದೆ ಮತ್ತು ಇದು ವೈಯಕ್ತಿಕ ಹಿತಾಸಕ್ತಿಗೇ ಹೆಚ್ಚು ಆದ್ಯತೆ ನೀಡಿದೆ. ಆದರೆ ಮಾನವೀಯ ಸ್ಪರ್ಶ ಇದಕ್ಕೆ ಲಭ್ಯವಾಗಿಲ್ಲ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ ಎನ್ನಲಾಗಿದೆ.
ಜಾಗತಿಕ ಸಂಪನ್ನತೆ ಮತ್ತು ಸಹಕಾರದ ವಿಚಾರದಲ್ಲಿ ಮಾನವೀಯತೆಯನ್ನು ಪ್ರಥಮ ಆದ್ಯತೆಯನ್ನಾಗಿಸಬೇಕು. ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿಯ ಫಲಗಳನ್ನು ಮುಕ್ತವಾಗಿ ಮತ್ತು ಉಚಿತವಾಗಿ ಹಂಚಿಕೊಳ್ಳಬೇಕಿದೆ, ಅಳವಡಿಸಿಕೊಳ್ಳಬಹುದಾದ, ಪ್ರತಿಫಲ ನಿಡುವ ಮತ್ತು ಮಾನವೀಯ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಹೇಳಲಾಗಿದೆ.
ಅಂತರ್ ಸಂಪರ್ಕಿತ ಜಾಗತಿಕ ಗ್ರಾಮವನ್ನು ಪ್ರೋತ್ಸಾಹಿಸುತ್ತಾ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೊಸ ವಿಪತ್ತು ನಿರ್ವಹಣೆ ಶಿಷ್ಟಾಚಾರಗಳನ್ನು ಪ್ರೋತ್ಸಾಹಿಸುವ ಅಗತ್ಯ ಮತ್ತು ಅಂತರ್‌ಸರ್ಕಾರಿ ಸಂಸ್ಥೆಗಳಾದ ಡಬ್ಲ್ಯೂಎಚ್‌ಒವನ್ನು ಸಶಕ್ತಗೊಳಿಸುವುದು ಮತ್ತು ಮರುರೂಪಿಸುವ ಅಗತ್ಯವನ್ನು ಪ್ರಸ್ತಾಪಿಸಿದರು.
ಅಷ್ಟೇ ಅಲ್ಲ, ಕೊವೀಡ್-19 ರಿಂದ ಉಂಟಾದ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನೂ ಇವರು ಪ್ರಸ್ತಾಪಿಸಿದ್ದಾರೆ. ನಮ್ಮ ಜಾಗತಿಕ ಪ್ರಜ್ಞೆಯ ಮಾನವೀಯ ದೃಷ್ಟಿಕೋನವು ಆರ್ಥಿಕ ಮತ್ತು ಹಣಕಾಸಿನ ಮೇಲೆ ಗಮನ ಹರಿಸಿದ್ದರಿಂದಾಗಿ ಕಡಿಮೆಯಾಗಿದೆ. ಈಗ ಕೋವಿಡ್ ಸಾಂಕ್ರಾಮಿಕ ರೋಗ ಒಂದು ಸವಾಲಾಗಿ ನಮ್ಮ ಎದುರು ಇರುವುದರಿಂದ, ಜಿ-20 ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಒಂದು ವಿಶಿಷ್ಟ ಅವಕಾಶವಾಗಿದ್ದು, ಮಾನವೀಯ ನೆಲೆಯ ಮೇಲೆ ನಿಂತ ಜಾಗತೀಕರಣದ ಕಲ್ಪನೆಯ ಮೇಲೆ ಗಮನ ಹರಿಸಬೇಕಿದೆ.
ಉಗ್ರವಾದವನ್ನು ನಿರ್ಮೂಲನೆ ಮಾಡುವುದೇ ಆಗಲಿ ಅಥವಾ ಹವಾಮಾನ ವೈಪರೀತ್ಯವನ್ನು ತಡೆಯುವುದೇ ಆಗಲಿ, ಆರ್ಥಿಕತೆ ಮತ್ತು ಹಣಕಾಸು ವಿಷಯದಲ್ಲಿ ಇದು ಹರಿಸಿದ ಗಮನದಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಿದೆ. ಇದನ್ನೇ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿ -20 ಪ್ರಸ್ತುತ ಅಧ್ಯಕ್ಷ ಸೌದಿ ಅರೇಬಿಯಾದ ಭಾವಿ ರಾಜರ ಜೊತೆ ಮಾತುಕತೆ ನಡೆಸುವಾಗ ಶೃಂಗದ ಸಭೆಯ ಕಲ್ಪನೆಯನ್ನು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದರು. ಈ ವರ್ಷದ ಕೊನೆಯಲ್ಲಿ ರಿಯಾದ್ನಲ್ಲಿ ಭೌತಿಕವಾಗಿ ಸಭೆ ಸೇರುವುದಕ್ಕೂ ಮೊದಲು ಈ ಸಭೆಯನ್ನು ನಡೆಸುವ ಅಗತ್ಯವನ್ನು ನಾಯಕರು ಮನಗಂಡರು.
ಕೋವಿಡ್-19 ರ ಶೇ. 90 ರಷ್ಟು ಪ್ರಕರಣಗಳು ಮತ್ತು ಶೇ. 88 ರಷ್ಟು ಸಾವು ಸಂಭವಿಸಿದ್ದು ಜಿ20 ದೇಶಗಳಲ್ಲೇ ಆಗಿದೆ. ಈ ದೇಶಗಳು ವಿಶ್ವದ ಜಿಡಿಪಿಯ ಶೇ. 80 ಮತ್ತು ಶೇ. 60 ರಷ್ಟು ಜನಸಂಖ್ಯೆಯನ್ನು ಒಳಗೊಂಡಿವೆ. ಸಾಂಕ್ರಾಮಿಕ ರೋಗವನ್ನು ತಡೆಯಲು ಮತ್ತು ಜನರನ್ನು ರಕ್ಷಿಸಲು ಸಂಯೋಜಿತ ಪ್ರತಿಕ್ರಿಯೆಯನ್ನು ಕಂಡುಕೊಳ್ಳಲು ವಿಶ್ವ ನಾಯಕರು ಸಭೆಯಲ್ಲಿ ಸಮ್ಮತಿಸಿದ್ದಾರೆ.
ಕೋವಿಡ್ 19 ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಎದುರಿಸಲು ಜಾಗತಿಕ ಆರ್ಥಿಕತೆಗೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಒದಗಿಸುವುದಕ್ಕೆ ದೇಶಗಳು ನಿರ್ಧರಿಸಿವೆ. ಸ್ವಯಂಪ್ರೇರಿತ ಆಧಾರದಲ್ಲಿ ಡಬ್ಲ್ಯೂಎಚ್‌ಒ ನೇತೃತ್ವದಲ್ಲಿ ಕೋವಿಡ್-19 ಐಕಮತ್ಯ ಪ್ರತಿಕ್ರಿಯೆ ಫಂಡ್ ಅನ್ನು ಪ್ರತ್ಯೇಕಿಸುವುದಕ್ಕೆ ನಾಯಕರು ನಿರ್ಧರಿಸಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಡಬ್ಲ್ಯೂಎಚ್‌ಒವನ್ನು ಇನ್ನಷ್ಟು ಸಶಕ್ತಗೊಳಿಸುವುದಕ್ಕೂ ದೇಶಗಳು ಬೆಂಬಲ ನೀಡಿವೆ. ವೈದ್ಯಕೀಯ ಪೂರೈಕೆಗಳು, ಡಯಾಗ್ನಾಸ್ಟಿಕ್ ಪರಿಕರಗಳು, ಚಿಕಿತ್ಸೆ, ಔಷಧಗಳು ಮತ್ತು ಚುಚ್ಚುಮದ್ದುಗಳ ಡೆಲಿವರಿಯಲ್ಲೂ ಡಬ್ಲ್ಯೂಎಚ್‌ಒ ಪ್ರಮುಖ ಪಾತ್ರ ವಹಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಡಬ್ಲ್ಯೂಎಚ್‌ಒ ರೀತಿಯ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸಶಕ್ತಗೊಳಿಸಬೇಕು ಮತ್ತು ಮರುರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ಈ ರೀತಿಯ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಡಬ್ಲ್ಯೂಎಚ್‌ಒ ಈ ಹಿಂದೆ ಯಾವುದೇ ಯೋಜನೆಯನ್ನು ಹೊಂದಿರಲಿಲ್ಲ. ಎಚ್ಚರಿಕೆ ನೀಡುವುದರಿಂದ ಪರಿಣಾಮಕಾರಿ ಲಸಿಕೆಗಳನ್ನು ಕಂಡುಹಿಡಿಯುವುದು ಅಥವಾ ಸಾಮರ್ಥ್ಯ ನಿರ್ವಹಣೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ಡಬ್ಲ್ಯೂಎಚ್‌ಒಗೆ ಸೂಕ್ತ ಬಲವನ್ನು ನೀಡಬೇಕಿದೆ” ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಜಾಗತಿಕ ಪ್ರಗತಿ, ಮಾರ್ಕೆಟ್ ಸ್ಥಿರತೆ ಮತ್ತು ಆರ್ಥಿಕ ಸಹಿಷ್ಣುತೆ ಮರುಸ್ಥಾಪಿಸಲು ಎಲ್ಲ ಲಭ್ಯ ಪಾಲಿಸಿ ಟೂಲ್‌ಗಳನ್ನೂ ಬಳಸಿಕೊಳ್ಳಲು ಜಾಗತಿಕ ನಾಯಕರು ಚಿಂತನೆ ನಡೆಸಿದ್ದಾರೆ. ಟೆಲಿಕಾನ್ಫರೆನ್ಸ್ ಸಂಪೂರ್ಣವಾಗಿ ಸಹಕಾರ ರೂಪದಲ್ಲಿತ್ತು. ಯಾವುದೇ ದೇಶವನ್ನು ಈ ಸಾಂಕ್ರಾಮಿಕ ರೋಗ ಹರಡಿದ ಬಗ್ಗೆ ಹೊಣೆ ಹೊರಿಸುವ ಪ್ರಕ್ರಿಯೆ ನಡೆಯಲಿಲ್ಲ.
ಕೊರೊನಾ ವೈರಸ್ ಅನ್ನು ತಡೆಯಲು ಭಾರತವು ಮೊದಲೇ ಕ್ರಮ ಕೈಗೊಂಡಿದ್ದಕ್ಕೆ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರೊಂದಿಗೆ ಪ್ರಧಾನಿ ಮೋದಿ ನಡೆಸಿದ ಸಂವಾದ ಮತ್ತು ದೇಶೀಯ ನೀತಿಗಳು ಹಾಗೂ ಆರ್ಥಿಕ ಚೇತರಿಕೆ ಕ್ರಮಗಳನ್ನು ಇಂದು ಮೋದಿ ಘೋಷಣೆ ಮಾಡಿದ್ದಕ್ಕೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಭೆಯ ಮೂಲ ಅಂಶವೇ ಸಹಕಾರವಾಗಿತ್ತು ಮತ್ತು ಚೀನಾ ಅಥವಾ ಯಾವುದೇ ರಾಷ್ಟ್ರದ ಮೇಲೆ ಹೊಣೆ ಹೊರಿಸದೇ ಇರುವುದೇ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.’ ಈ ವಿಪತ್ತಿಗೆ ಯಾರನ್ನು ಜವಾಬ್ದಾರರನ್ನಾಗಿಸಬೇಕು ಎಂಬುದರಿಂದ ಎಲ್ಲಿಂದ ಹರಡಿತು ಎಂಬುದರ ವರೆಗೆ ಯಾವುದೇ ಉಲ್ಲೇಖವೂ ಸಭೆಯಲ್ಲಿ ನಡೆದಿಲ್ಲ. ಈ ಸವಾಲನ್ನು ಎದುರಿಸಲು ನಾವು ಏನು ಮಾಡಬಹುದು, ಈ ಸಮಸ್ಯೆ ಉಂಟು ಮಾಡಿದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಮತ್ತು ಇತರ ರಾಷ್ಟ್ರಗಳನ್ನು ಸಹಾಯ ಮಾಡಲು ನಾವು ಏನು ಮಾಡಬಹುದು ಮತ್ತು ನಾವು ಹೇಗೆ ಸಿದ್ಧತೆ ಮಾಡಿಕೊಳ್ಳುವುದು ಎಂಬ ಕುರಿತೇ ಎಲ್ಲರೂ ಗಮನ ಹರಿಸಿದ್ದರು.
ಇದು ಕೇವಲ ಕೋವಿಡ್ 19 ಅನ್ನು ನಿರ್ವಹಿಸುವುದಷ್ಟೇ ಅಲ್ಲ, ಮುಂದೆ ಈ ರೀತಿಯ ಅಥವಾ ಇದಕ್ಕಿಂತ ತೀವ್ರವಾದ ಜಾಗತಿಕ ಸಾಂಕ್ರಾಮಿಕ ರೋಗ ಕಂಡುಬಂದಾಗ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಈ ವೇಳೆ ಚರ್ಚೆ ನಡೆಸಲಾಯಿತು. ಇದೊಂದು ಎಚ್ಚರಿಕೆಯ ಕರೆಯಂತಿತ್ತು. ಆದರೆ, ಯಾವುದೇ ರಾಷ್ಟ್ರದ ಮೇಲೆ ಹೊಣೆ ಹೊರಿಸದೇ ಇರಲು ಇವರು ನಿರ್ಧರಿಸಿದ್ದರು” ಎಂದು ಮೂಲಗಳು ತಿಳಿಸಿವೆ.
ಭಾರತ ನೇತೃತ್ವದಲ್ಲಿ ಸಾರ್ಕ್ ಆನ್‌ಲೈನ್ ಸಮ್ಮೇಳನದಿಂದ ಆರಂಭವಾಗಿ ವರ್ಚುವಲ್ ಭೇಟಿಯ ಸರಣಿಯನ್ನು ಜಿ-20 ಶೃಂಗವು ನಡೆಸಿತು. ಮರುದಿನ ಜಿ7 ವಿಶ್ವ ನಾಯಕರು ಸಭೆ ನಡೆಸಿದರು. ಈ ಹಿಂದೆ ಪ್ರಮುಖ ನಾಯಕರು ಪ್ರಸ್ತಾಪಿಸಿದ ಐಡಿಯಾಗಳ ಕುರಿತು ಚರ್ಚೆ ನಡೆಸಲು ಎರಡು ಗಂಟೆಗಳ ಟೆಲಿಕಾನ್ಫರೆನ್ಸ್ ಸಭೆಯನ್ನು ಎಲ್ಲ ಸಾರ್ಕ್ ಸದಸ್ಯ ರಾಷ್ಟ್ರಗಳ ಆರೋಗ್ಯ ವೃತ್ತಿಪರರು ನಡೆಸಿದ ದಿನವೇ ಭಾರತದ ವಿಶ್ವ ಮಟ್ಟದ ಸಭೆಯೂ ನಡೆದಿದೆ.
ಈ ಸಭೆಯಲ್ಲಿ ಭಾರತವು ತುರ್ತು ಕೋವಿಡ್ ಫಂಡ್ ರೂಪದಲ್ಲಿ 10 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಒದಗಿಸಿದೆ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಎಂಟು ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟವು 5 ಮಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚು ಮೊತ್ತವನ್ನು ಇದು ಕ್ರೋಢೀಕರಿಸಲಾಗಿದೆ.
ಈ ಉಪಕ್ರಮವನ್ನು ನಾವು ತೆಗೆದುಕೊಳ್ಳದೇ ಇದ್ದರೆ, ನಮ್ಮ ಭೂ ಗಡಿ ಮತ್ತು ನೌಕಾ ಗಡಿಯಾದ್ಯಂತ ಸಾರ್ಕ್‌ನೊಂದಿಗೆ ಪ್ರಾದೇಶಿಕ ಸಹಕಾರವನ್ನು ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಈಗ ನಾವು ಪರಸ್ಪರ ಸಹಾಯ ಮತ್ತು ಸಹಕಾರವನ್ನು ಒದಗಿಸುತ್ತಿದ್ದೇವೆ. ನಮ್ಮ ಸಹಕಾರವು ಈಗಾಗಲೇ ಹಲವು ಸಾರ್ಕ್ ದೇಶಗಳಿಗೆ ಒದಗುತ್ತಿದೆ. ಶಿಷ್ಟಾಚಾರವನ್ನು ರೂಪಿಸುವುದು, ಪರೀಕ್ಷೆ ಸಮಸ್ಯೆಗಳನ್ನು ನಿರ್ವಹಿಸುವುದು, ಔಷಧಗಳು, ರಕ್ಷಣಾತ್ಮಕ ಗಿಯರ್‌ಗಳನ್ನು ಒದಗಿಸುವಲ್ಲಿ ಸಾರ್ಕ್ ದೇಶಗಳಿಗೆ ಮುಂಚೂಣಿಯಲ್ಲಿ ನಿಂತು ನಾವು ಸಹಾಯ ಮಾಡುತ್ತಿದ್ದೇವೆ. ಈ ಸಮಸ್ಯೆಯನ್ನು ಜಾಗತಿಕ ಮಟ್ಟದಲ್ಲಿ ನಿರ್ವಹಿಸುವ ಕ್ರಮವನ್ನೂ ನಾವು ತೆಗೆದುಕೊಂಡಿದ್ದೇವೆ” ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಲಿಂಪಿಕ್ ಗೇಮ್ಸ್ ವೇಳಾಪಟ್ಟಿಯನ್ನು 2021ಕ್ಕೆ ಮುಂದೂಡಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮಾಡಿದ ನಿರ್ಧಾರವನ್ನು ಜಿ20 ದೇಶಗಳು ಸ್ವಾಗತಿಸಿವೆ. ನಿರ್ಬಂಧಗಳು ಮತ್ತು ಲಾಕ್‌ಡೌನ್‌ಗಳು ತಾತ್ಕಾಲಿಕವಾಗಿರುತ್ತವೆ. ಆದರೆ ಇದು ಎಷ್ಟು ದಿನಗಳ ಕಾಲ ಇರುತ್ತದೆ ಎಂಬುದನ್ನು ಹೇಳಲಾಗದು. ಮುಂದಿನ ದಿನಗಳಲ್ಲಿ ನೀಲನಕ್ಷೆಯನ್ನು ರೂಪಿಸುವ ನಿಟ್ಟಿನಲ್ಲಿ ಇಂದು ನೀಡಿದ ಜಂಟಿ ಹೇಳಿಕೆಗಿಂತ ಪ್ರತ್ಯೇಕವಾಗಿ ಕ್ರಿಯಾಯೋಜನೆಯ ಕರಡು ರೂಪಿಸಲು ಸಮೂಹವು ನಿರ್ಧರಿಸಿದೆ. ಜಿ-20 ಶೆರ್ಪಾಗಳ ನೇತೃತ್ವದಲ್ಲಿ ರೂಪುರೇಷೆ ಜಂಟಿ ಕಾರ್ಯತಂಡವು ಭೇಟಿ ಮಾಡಿ ಕಾರ್ಯಾಚರಿಸಬಹುದಾದ ಯೋಜನೆಯನ್ನು ಅಂತಿಮಗೊಳಿಸಲಿದೆ.