ಮಳೆನೀರು ಸಂಗ್ರಹಿಸುವ ರಾಷ್ಟ್ರಗಳ ಜಾಗತಿಕ ಸೂಚ್ಯಂಕದಲ್ಲಿ ಭಾರತ ಕನಿಷ್ಠ ಸ್ಥಾನದಲ್ಲಿದೆ. ದೇಶದಲ್ಲಿ ಕೇವಲ ಶೇ.8% ರಷ್ಟು ಮಾತ್ರ ಮಳೆ ನೀರು ಸಂಗ್ರಹವಾಗುತ್ತಿದೆ. ಮತ್ತೊಂದೆಡೆ, ಯಾವುದೇ ಮುನ್ನೆಚ್ಚರಿಕಾ ಕ್ರಮಗಳಿಲ್ಲದೆ ಹೇಗೆಂದರೆ ಹಾಗೆ ಭೂ ಗರ್ಭಕ್ಕೆ ಕೈಹಾಕಲಾಗುತ್ತಿದೆ. ಇದರಿಂದಾಗಿ ಅಂತರ್ಜಲ ಸಂಗ್ರಹ ಬಹುತೇಕ ಶೂನ್ಯ ಎನ್ನುವ ಸ್ಥಿತಿಗೆ ತಲುಪಿದೆ. ಆರು ವಾರಗಳ ಹಿಂದೆ, ಕೇಂದ್ರ ಸರ್ಕಾರ ‘ಜಲ ಶಕ್ತಿ ಅಭಿಯಾನ’ ಯೋಜನೆಯಡಿ ನೈಸರ್ಗಿಕ ನೀರಿನ ಸಂಗ್ರಹ ಉಳಿಸುವ ವಿಶಿಷ್ಟ ಯೋಜನೆಯೊಂದನ್ನು ಜಾರಿಗೆ ತಂದಿತು. ಆಯಾ ರಾಜ್ಯ ಸರ್ಕಾರಗಳ ಪ್ರೋತ್ಸಾಹಕ್ಕೆ ಅನುಗುಣವಾಗಿ 256 ಜಿಲ್ಲೆಗಳು ಮತ್ತು 1592 ವಲಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
ಸರ್ಕಾರ ಇದೇ ಸಂದರ್ಭದಲ್ಲಿ ಸುರಕ್ಷಿತ ಕುಡಿಯುವ ನೀರಿನ ಸಂರಕ್ಷಣೆ ಮತ್ತು ಲಭ್ಯತೆ ಬಗೆಗೆ ಭರವಸೆ ನೀಡಿದೆ. ‘ಜಲಶಕ್ತಿ ಅಭಿಯಾನ’ದಡಿ ಸ್ಥಳೀಯ ಸಂಸ್ಥೆಗಳಿಗೆ ಮಾರ್ಗಸೂಚಿಗಳ ಕ್ರೋಡೀಕರಣ ನಡೆಸಿದ್ದ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಅವರ ಜನ್ಮದಿನಾಚರಣೆಯಂದು ನರೇಂದ್ರ ಮೋದಿ ಸರ್ಕಾರ ಏಳು ರಾಜ್ಯಗಳಲ್ಲಿ 'ಅಟಲ್ ಭೂಜಲ ಯೋಜನೆ'ಗೆ ಚಾಲನೆ ನೀಡಿದೆ. ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ 78 ಜಿಲ್ಲೆಗಳ ಸುಮಾರು 8,300 ಹಳ್ಳಿಗಳು ₹ 6,000 ಕೋಟಿ ವೆಚ್ಚದ ಈ ಯೋಜನೆಯ ಲಾಭ ಪಡೆಯಲಿವೆ.
ಮೇಲೆ ತಿಳಿಸಲಾದ ಹಳ್ಳಿಗಳಲ್ಲಿ ಇನ್ನು ಐದು ವರ್ಷಗಳಲ್ಲಿ ಅಂತರ್ಜಲ ಮತ್ತಷ್ಟು ಅಭಿವೃದ್ಧಿಪಡಿಸುವ ಗುರಿ ಈ ಯೋಜನೆಯದ್ದು. ಅರ್ಧದಷ್ಟು ಮೊತ್ತವನ್ನು ವಿಶ್ವಬ್ಯಾಂಕ್‌ನಿಂದ ಪಡೆದ ಸಾಲಕ್ಕೆ ಜಮಾ ಮಾಡಿ, ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ಯೋಜನಾ ಸಹಾಯದ ರೂಪದಲ್ಲಿ ರಾಜ್ಯಗಳಿಗೆ ನೀಡಲಿದೆ. ಆಯಾ ರಾಜ್ಯದ ಹಿತಾಸಕ್ತಿ ಮತ್ತು ಸನ್ನದ್ಧತೆ ಆಧಾರದ ಮೇಲೆ ಈ ಪಟ್ಟಿ ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆದರೆ, ಪಂಜಾಬ್ ಸರ್ಕಾರ ಈ ಕುರಿತು ಅಪಸ್ವರ ಎತ್ತಿದೆ. ಕೇಂದ್ರ ಸರ್ಕಾರ ಹೇಳಿಕೊಂಡಂತೆ ದತ್ತಾಂಶ ಸಂಗ್ರಹ ಅಪೂರ್ಣ. ಹಾಗೂ ಸಂಗ್ರಹ ಕಾರ್ಯ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಹೇಳಿದೆ. ಪಠಾಣ್‌ಕೋಟ್ ಮತ್ತು ಮುಕ್ತಸರ್ ಹೊರತುಪಡಿಸಿ ಉಳಿದ 20 ಜಿಲ್ಲೆಗಳಲ್ಲಿ ಅಂತರ್ಜಲ ಕೊರತೆ ಎದುರಾಗಿದ್ದರೂ ಪಂಜಾಬ್ ಅನ್ನು ನೂತನ ಯೋಜನೆಗೇಕೆ ಸೇರಿಸಿಲ್ಲ ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಶ್ನಿಸಿದ್ದಾರೆ.
ಆ ಪ್ರಕಾರ ಯೋಜನೆಗೆ ಹೆಚ್ಚಿನ ಪ್ರದೇಶಗಳನ್ನು ಸೇರಿಸಿದರೆ, ಯೋಜನಾ ವೆಚ್ಚವನ್ನು ಸೂಕ್ತ ರೀತಿಯಲ್ಲಿ ಹೆಚ್ಚಿಸಬೇಕು. ಇಲ್ಲದಿದ್ದರೆ ಕಾರ್ಯಗತಗೊಳಿಸಲು ಆಗುವುದಿಲ್ಲ. ವಾಸ್ತವವಾಗಿ ಪ್ರತಿ ಹಳ್ಳಿ ತನ್ನ ನೈಸರ್ಗಿಕ ಮತ್ತು ಅಂತರ್ಜಲ ನಿಧಿಯನ್ನು ಸಂರಕ್ಷಿಸಲು ಶ್ರಮಿಸುವುದಷ್ಟೇ ಅಲ್ಲ, ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆದು ಜಲ ಸಂಪನ್ಮೂಲ ಬಳಕೆ ತಗ್ಗಿಸಲು ಯತ್ನಿಸಬೇಕು ಎಂದಿದ್ದಾರೆ ಪ್ರಧಾನಿ ಮೋದಿ. ಅವರ ಈ ಹೇಳಿಕೆ ಪ್ರಸ್ತುತ ಸನ್ನಿವೇಶದಲ್ಲಿ ಇಡೀ ದೇಶಕ್ಕೆ ಅನ್ವಯವಾಗುತ್ತದೆ.
'ಭಾರತದ ಜಲ ಮನುಷ್ಯ’ ಹಾಗೂ 'ಭಾರತದ ಜಲ ರಕ್ಷಕ' ಎಂದೇ ಜನಜನಿತರಾದ ರಾಜೇಂದ್ರ ಸಿಂಗ್ ಅವರು, ಸದ್ಯಕ್ಕೆ ದೇಶದ ಶೇ.72 ರಷ್ಟು ಅಂತರ್ಜಲ ಸಂಗ್ರಹ ಬರಿದಾಗಿದೆ ಎಂದು ಅಂದಾಜಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಾಸಾ ಒಂದು ಅಧ್ಯಯನ ನಡೆಸಿತ್ತು. ಅಮೆರಿಕದ ಅತಿದೊಡ್ಡ ಜಲಾಶಯ ಮೀಡ್ ಸರೋವರದ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಅಂತರ್ಜಲವನ್ನು ಭಾರತ ಕಳೆದುಕೊಂಡಿದೆ ಎಂದು ಅದು ಎಚ್ಚರಿಸಿತ್ತು. ಇದರ ಹೊರತಾಗಿಯೂ ಅಂತರ್ಜಲ ನಿಕ್ಷೇಪಗಳ ಬೇಜವಾಬ್ದಾರಿಯುತ ಬಳಕೆ ಕಿಂಚಿತ್ತೂ ಕಡಿಮೆಯಾಗಿಲ್ಲ!
ದೇಶ ಸ್ವಾತಂತ್ರ್ಯ ಪಡೆದಾಗಿದ್ದ ಅಂತರ್ಜಲದ ತಲಾ ನೀರಿನ ಲಭ್ಯತೆ 6,042 ಘನ ಮೀಟರ್. ಇಂದು ಅದರ ಲಭ್ಯತೆ ಕಾಲು ಭಾಗಕ್ಕಿಂತಲೂ ಕಡಿಮೆಯಿದ್ದು, ಅದು ಇನ್ನಷ್ಟು ಇಳಿಮುಖದತ್ತ ಸಾಗುತ್ತಿದೆ. ಸಮಸ್ಯೆಯ ಮೂಲ ಮತ್ತು ಬಿಕ್ಕಟ್ಟಿನ ಸ್ವರೂಪ ಎಲ್ಲರೂ ಬಲ್ಲ ಗುಟ್ಟು. ಆದರೂ, ಯಾರೂ ಇನ್ನೂ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ. ದೇಶದ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯನ್ನು ಹಲವು ದಶಕಗಳ ಹಿಂದೆ ಹೊರತಂದಿದ್ದು, ಯಾವುದೇ ಯಶಸ್ಸು ಸಾಧ್ಯವಾಗಿಲ್ಲ!
ನೀರು ಪೋಲಾಗುವಿಕೆ ತಡೆಗಟ್ಟಲು ಕೈಗೊಂಡ ಕ್ರಮಗಳು ತೃಪ್ತಿಕರ ಆಗಿಲ್ಲ ಎಂಬ ಮಹಾ ಲೆಕ್ಕಪರಿಶೋಧಕರ ವರದಿ ಹೊರತಾಗಿಯೂ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಯಾವುದೇ ಸಹಾಯ ದೊರೆತಿಲ್ಲ. ಪರಿಣಾಮ ಅಂತರ್ಜಲದ ಮೇಲಿನ ಒತ್ತಡ ತೀವ್ರಗೊಂಡಿದೆ. ಮತ್ತು 160 ಜಿಲ್ಲೆಗಳ ಜಲಾಶಯಗಳು ಲವಣಯುಕ್ತ ಆಗಿವೆ. 230 ಜಿಲ್ಲೆಗಳಲ್ಲಿ ಫ್ಲೋರೈಡ್ ರಕ್ಕಸನ ಅಟ್ಟಹಾಸ ಹೆಚ್ಚಾಗಿದೆ. 'ಮಿಷನ್ ಕಾಕತೀಯ' (ತೆಲಂಗಾಣ), 'ನೀರು-ಚೆಟ್ಟು' (ಆಂಧ್ರ ಪ್ರದೇಶ), 'ಮುಖ್ಯಮಂತ್ರಿ ಜಲ್ಸ್ವಾಭಿಮಾನ ಅಭಿಯಾನ' (ರಾಜಸ್ಥಾನ) ಮತ್ತು 'ಸುಜಲಾಂ ಸುಫಲಾಂ ಯೋಜನೆ' (ಗುಜರಾತ್)... ಹೀಗೆ ಅಂತರ್ಜಲ ಸಂರಕ್ಷಣೆಗೆ ರಾಜ್ಯಮಟ್ಟದಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿದ್ದರೂ, ರಾಷ್ಟ್ರಮಟ್ಟದಲ್ಲಿ ಸಮಗ್ರ ಪ್ರಯತ್ನಕ್ಕೆ ಸಮನ್ವಯದ ಕೊರತೆ ಎದುರಾಗಿರುವುದು ದೊಡ್ಡ ನ್ಯೂನತೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನದ ಸಮಾನ ಸಹಭಾಗಿತ್ವ ಮಾತ್ರ ಅಂತರ್ಜಲ ಉಳಿಸಲು ದೇಶಕ್ಕೆ ದೊರೆಯುವ ಹೊಸ ಮಾರ್ಗ ಎನ್ನಬಹುದು.
ದೇಶದೆಲ್ಲೆಡೆ ಗುಣಮಟ್ಟದ ಜಲಾಶಯಗಳ ನಿರ್ಮಾಣ ಮತ್ತು ಎಲ್ಲಾ ನಾಗರಿಕರಿಗೆ ನೀರು ಸರಬರಾಜು ಮಾಡುವುದು ಸುಲಭದ ಮಾತಲ್ಲ. ನೀರಾವರಿಗೆ ಅಗತ್ಯವಾದ ಜಲದ ಬೇಡಿಕೆ ಮತ್ತು ಲಭ್ಯತೆ ನಡುವಿನ ಅಂತರದ ಬಗ್ಗೆ ಕೇಂದ್ರ ಸರ್ಕಾರ ವಿಶ್ಲೇಷಣೆ ನಡೆಸಿದೆ. 14 ಕೋಟಿ ಗ್ರಾಮೀಣ ಕುಟುಂಬಗಳಿಗೆ ಐದು ವರ್ಷಗಳಲ್ಲಿ ನೀರು ಒದಗಿಸಲು ₹ 3.60 ಲಕ್ಷ ಕೋಟಿ ವೆಚ್ಚ ಆಗಲಿದೆ ಎಂಬ ಅಂದಾಜಿನೊಂದಿಗೆ ನೀರಿನ ಬೇಡಿಕೆ ಶೇ.43 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಜಲ ಜೀವನ್ ಮಿಷನ್ ಹೇಳಿದೆ. ಪ್ರಸ್ತುತ ಸನ್ನಿವೇಶ ಗಮನಿಸಿ ಕೇಂದ್ರ ಮತ್ತು ರಾಜ್ಯಗಳು ಖರ್ಚನ್ನು ಸಮಾನವಾಗಿ ಹಂಚಿಕೊಂಡರೂ, ಆ ಬೇಡಿಕೆ ಈಡೇರಿಸುವುದು ಅನಿಶ್ಚಿತವೇ ಆಗಿದೆ!
ಮೂರೂವರೆ ವರ್ಷಗಳ ಹಿಂದೆ ಮಿಹಿರ್ ಷಾ ಸಮಿತಿ ಸಮಕಾಲೀನ ಅಗತ್ಯಗಳನ್ನು ಪೂರೈಸಲು ಕೇಂದ್ರೀಯ ಜಲಮೂಲ ಮತ್ತು ಅಂತರ್ಜಲ ವ್ಯವಸ್ಥೆಯನ್ನು ಮರು ಸಂಘಟಿಸಬೇಕು ಎಂದು ಸೂಚಿಸಿತ್ತು. ಅಂತರ್ಜಲ ಕಣ್ಮರೆ ಆಗುತ್ತಿರುವ ಪ್ರದೇಶಗಳಲ್ಲಿ ಸಹಕಾರಿ ಕೃಷಿಗೆ ಒತ್ತು ಮತ್ತು ನೀರಿನ ಬಜೆಟ್ ರೂಪಿಸಿಕೊಳ್ಳುವಂತೆ ರೈತರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಅದೇ ರೀತಿ, ಸರ್ಕಾರ ನೀರಿನ ಬಳಕೆ ಮೇಲ್ವಿಚಾರಣೆ ಮಾಡುವುದು ಮತ್ತು ಆಯಾ ರೈತರಿಗೆ ಮಾರ್ಗದರ್ಶನ ಮತ್ತು ತಾಂತ್ರಿಕ ಜ್ಞಾನ ಒದಗಿಸುವುದು ಕಡ್ಡಾಯವಾಗಿದೆ.
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ನಲ್ಲಿ ಅಂತರ್ಜಲ ನಿಕ್ಷೇಪ ಉಳಿಸಲು ಮತ್ತು ನೀರು ಪೋಲಾಗುವುದನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚೀನಾದಲ್ಲಿ ಯಾವುದೇ ಜಲಮೂಲಗಳು ಕಲುಷಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸುಮಾರು 1.2 ಕೋಟಿ ಪಾಲಕರು ಹೊತ್ತಿದ್ದಾರೆ ಎಂದು ಅಲ್ಲಿನ ಸರ್ಕಾರ ಖಚಿತಪಡಿಸಿದೆ. ಕೆಲವು ದೇಶಗಳು ಮಳೆ ನೀರು ವ್ಯರ್ಥವಾಗದಂತೆ ಮತ್ತು ಅದರ ಸೂಕ್ತ ಸಂಗ್ರಹ ಕುರಿತಂತೆ ನವೀನ ಮಾರ್ಗಗಳನ್ನು ಕಂಡುಕೊಂಡು ಹೆದ್ದಾರಿ ಮತ್ತು ರಸ್ತೆಗಳ ನಿರ್ಮಾಣದಲ್ಲಿ ತೊಡಗಿವೆ.
ಪ್ರತಿ ಹನಿ ನೀರಿನಿಂದ ಗರಿಷ್ಠ ಲಾಭ ಪಡೆಯುವ ರಾಷ್ಟ್ರೀಯ ಕೃಷಿ ನೀತಿ ರೂಪಿಸಿದರೆ, ಬೆಳೆ ಇಳುವರಿಯೂ ಹೆಚ್ಚಾಗುತ್ತದೆ. ಹನಿ ಹನಿ ಕೂಡಿದರೆ ಹಳ್ಳ ಎಂದು ಹೇಳಿದಂತೆ, ದೇಶ ಪ್ರತಿವರ್ಷ ಅನುಭವಿಸುವ ನೀರಿನ ಸಮಸ್ಯೆಗಳು ಕೊಚ್ಚಿ ಹೋಗುತ್ತವೆ. ಪುರಸಭೆಗಳು ಕೊಳವೆ ಬಾವಿಗಳ ಕೊರೆಯುವುದರ ಮೇಲೆ ನಿಗಾ ಇಡಬೇಕು. ಮತ್ತು ಅಂತಹ ಬಾವಿಗಳ ಮರುಪೂರಣಕ್ಕೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರ ಐದು ತಿಂಗಳ ಹಿಂದೆ ಮಾರ್ಗಸೂಚಿಗಳನ್ನು ನೀಡಿದೆ. ಇವುಗಳನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತಂದರೆ 'ಅಟಲ್ ಭೂಜಲ ಯೋಜನೆ' ದೇಶದೆಲ್ಲೆಡೆ ಹಬ್ಬುತ್ತದೆ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ!