ತಿರುಪತಿ (ಆಂಧ್ರಪ್ರದೇಶ): ತಿರುಪತಿ ತಿರುಮಲ ದೇವಸ್ಥಾನಂ ಮಂಡಳಿಯ 14 ಮಂದಿ ಅರ್ಚಕರಿಗೆ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಟಿಟಿಡಿ ತುರ್ತು ಸಭೆ ಕರೆದು ಮಹತ್ವದ ಚರ್ಚೆ ನಡೆಸಿದೆ.
ಸುಮಾರು 50 ಮಂದಿಗೆ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ ಇನ್ನೂ 25 ಮಂದಿಯ ಸೋಂಕು ಪರೀಕ್ಷಾ ವರದಿ ಬಹಿರಂಗವಾಗಬೇಕಿದ್ದು, ದೇವಾಲಯ ಆಡಳಿತ ಮಂಡಳಿಯಲ್ಲಿ ಆತಂಕ ಮೂಡಿಸಿದೆ.
ಇದಕ್ಕೂ ಮೊದಲು ಟಿಟಿಡಿಯಲ್ಲಿ ಕೆಲಸ ಮಾಡುತ್ತಿದ್ದ 91 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಜುಲೈ 10ರವರೆಗೆ ಸುಮಾರು ಟಿಟಿಡಿಯಲ್ಲಿ ಕೆಲಸ ಮಾಡುತ್ತಿದ್ದ 1,865 ಮಂದಿ, ತಿರುಪತಿಗೆ ಸಂಬಂಧಿಸಿದ ಮತ್ತೊಂದು ಪುಣ್ಯಕ್ಷೇತ್ರ ಅಲಿಪಿರಿಯಲ್ಲಿ ಕೆಲಸ ಮಾಡುತ್ತಿದ್ದ 1,704 ಮಂದಿ ಹಾಗೂ ತಿರುಮಲ ದೇವಾಲಯಕ್ಕೆ ಬಂದಿದ್ದ 631 ಭಕ್ತರಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಲಾಗಿದೆ.
ಸೋಂಕು ಪರೀಕ್ಷೆ ವರದಿ ಬಂದ ನಂತರ ಜುಲೈ 12ರಂದು ಸಭೆ ಕರೆದಿದ್ದ ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಾಲ್ 91 ಮಂದಿಗೆ ಸೋಂಕು ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿದೆ. ತಿರುಪತಿಗೆ ಬಂದಿದ್ದ ಭಕ್ತರ ಆರೋಗ್ಯದ ಬಗ್ಗೆ ದೂರವಾಣಿ ಮೂಲಕ ವಿಚಾರಿಸಲಾಗಿದೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ಈಗ ಮತ್ತೊಂದು ವರದಿ ಬಹಿರಂಗವಾಗಿದ್ದು, 14 ಮಂದಿಗೆ ಅರ್ಚಕರಿಗೆ ಸೋಂಕು ತಗುಲಿದೆ. ಇದರಿಂದಾಗಿ ಜೂನ್ 11ರಂದು ತೆರೆದಿದ್ದ, ವೆಂಕಟೇಶ್ವರನ ಸನ್ನಿಧಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.