ಬ್ರೆಜಿಲ್: ದಪ್ಪ ಇದ್ರೇ ಕಷ್ಟ ಏನ್ರೀ.. ಅವರ ದೇಹ ಅವರ ಮಾತು. ಡುಮ್ಮಿಯರನ್ನ ಡುಮ್ಮಿ ಅಂದ್ರೇನೆ ತಡೆದುಕೊಳ್ಳಲಾರದ ಸಿಟ್ಟು ಬಂದೇ ಬರುತ್ತೆ. ಅಂತಹದರಲ್ಲಿ ಪಾದ್ರಿಯೊಬ್ಬರು ಡುಮ್ಮಿಯರ ಬಗ್ಗೆ ಒಂದು ಮಾತು ಹೇಳಿ ಪಡಬಾರದ ಪಡಿಪಾಟಲು ಪಟ್ಟಿರುವ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
ಸ್ಟೇಜ್ ಮೇಲೆ ಬಂದವಳೇ ಪಾದ್ರಿಯನ್ನ ತಳ್ಳಿಬಿಟ್ಟಳು ಡುಮ್ಮಿ!
ಬ್ರೆಜಿಲ್‌ನ ವಾಣಿಜ್ಯನಗರಿ ಸಾವ್ ಪೌಲೋದ ಪಕ್ಕದ ನಗರ ಕ್ಯಾಚೋರಾ ಪೌಲಿಸ್ತಾದ ಕ್ಯಾನ್‌ಕೌವ್ ನೋವಾ ಚರ್ಚ್‌ನಲ್ಲಿ ಇಂತಹ ಒಂದು ಘಟನೆ ನಡೆದಿದೆ. ಬ್ರೆಜಿಲ್‌ನ ರೋಮನ್ ಕ್ಯಾಥೊಲಿಕ್ ಬಹುಸಂಖ್ಯಾತ ಸಮುದಾಯ. ಈ ಸಮುದಾಯಕ್ಕೆ ಸೇರಿದ ಖ್ಯಾತ ಪಾದ್ರಿ ಮಾರ್ಷೆಲೊ ರೊಸ್ಸಿ. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ಸಾವಿರಾರು ನೂರಾರು ಅನುಯಾಯಿಗಳಿಗೆ ಪ್ರವಚನ ನೀಡುತ್ತಿದ್ದರು. ಕೊಬ್ಬು ಹೊಂದಿದ ಡುಮ್ಮಿಯರು ಸ್ವರ್ಗಕ್ಕೆ ಹೋಗೋದಿಲ್ಲ ಅಂತಾ ಪಾದ್ರಿ ಹೇಳಿಬಿಟ್ಟರು. ಇಷ್ಟಾಗ್ತಿದ್ದಂತೆಯೇ ಮಹಿಳೆಯೊಬ್ಬಳು ಏಕಾಏಕಿ ಸ್ಟೇಜ್ ಮೇಲೆ ಹತ್ತಿದ್ದಳು. ಎಲ್ಲರೂ ನೋಡ್ತಿದ್ದಂತೆಯೇ ಪಾದ್ರಿಯನ್ನ ವೇದಿಕೆ ಮೇಲಿಂದಲೇ ತಳ್ಳಿಬಿಟ್ಟಳು. ಈ ಎಲ್ಲ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೇ ಆಘಾತಕಾರಿ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಘಾತಕಾರಿ ವಿಡಿಯೋ ವೈರಲ್!
'ಚಿಂತೆ ಮಾಡಬೇಡಿ, ನಾನು ಚೆನ್ನಾಗಿರುವೆ. ಒಂದಿಷ್ಟು ಸಣ್ಣಪುಟ್ಟ ನೋವಾಗಿದೆ ಅಷ್ಟೇ.. ಈಗ ಸಹಜ ಸ್ಥಿತಿಗೆ ಬಂದಿರುವೆ. ನನಗೆ ಯಾವುದೇ ಗಾಯಗಳಾಗಿಲ್ಲ. ನಿಮಗೆಲ್ಲ ನನ್ನ ಅಭಯ' ಅಂತಾ ಮಹಿಳೆಯಿಂದ ತಳ್ಳಲ್ಪಟ್ಟ ಪಾದ್ರಿ ರೊಸ್ಸಿ ಘಟನೆ ಬಳಿಕ ಪ್ರತಿಕ್ರಿಯಿಸಿದ್ದಾರೆ. ವಿಶೇಷ ಅಂದ್ರೇ ತಮ್ಮನ್ನ ತಳ್ಳಿದ ಮಹಿಳೆ ಬಗ್ಗೆ ರಿಯಾಕ್ಟ್ ಮಾಡದೇ, ಪರಿಸ್ಥಿತಿ ತಿಳಿಗೊಳಿಸುವ ಯತ್ನವನ್ನ ಪಾದ್ರಿ ಮಾಡಿದರು. ಆದರೆ, ಇದರಿಂದ ಸಾವಿರಾರು ಅನುಯಾಯಿಗಳು ಆಘಾತಕ್ಕೊಳಗಾಗಿದ್ದರು. ಪಾದ್ರಿಯನ್ನ ತಳ್ಳಿದ ಮಹಿಳೆ ಮಾನಸಿಕ ಅಸ್ವಸ್ಥೆ ಅಂತಾ ಆಕೆಯ ಸ್ನೇಹಿತೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದರು.
ಯಾವುದೇ ದೂರು ನೀಡದ ಪಾದ್ರಿ, ಆರೋಪಿ ಮಹಿಳೆ ರಿಲೀಸ್!
'ಮಹಿಳೆ ನಡೆಸಿದ ದಾಳಿಯಿಂದ ಫಾದರ್ ಸಾಕಷ್ಟು ನೋವು ಅನುಭವಿಸಿದ್ದಾರೆ. ಶೀಘ್ರ ಅವರು ಚೇತರಿಸಿಕೊಳ್ಳಲೆಂದು ನಾವು ಪ್ರಾರ್ಥಿಸ್ತಿದ್ದೇವೆ. ಅದೃಷ್ಟವಶಾತ್ ಪಾದ್ರಿಯವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಫಾದರ್ ಮತ್ತೆ ಪ್ರವಚನ ನೀಡಿದರು ಅಂತಾ ಚರ್ಚ್‌ನ ಆಡಳಿತ ಮಂಡಳಿ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದೆ. ವಿಶೇಷ ಅಂದ್ರೇ ಮಹಿಳೆಯ ವಿರುದ್ಧ ಕ್ರಿಶ್ಚಿಯನ್ ಪಾದ್ರಿ ಯಾವುದೇ ದೂರನ್ನ ಪೊಲೀಸರಿಗೆ ನೀಡಲಿಲ್ಲ. ಹಾಗಾಗಿ ಈಗ ಮಹಿಳೆಯನ್ನ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.