ಮಹಾಬುಬ್ ನಗರ(ತೆಲಂಗಾಣ): ಜಿಲ್ಲೆಯ ಗಂಡೀದ್ ವಲಯದ ಶೇಕ್‌ಪಲ್ಲಿ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಬಡ ವಿದ್ಯಾರ್ಥಿಗೆ ಅವನ ಪೋಷಕರ ನೆರವು ನೋಡಿದ್ರೆ ಎಂಥವರು ಒಮ್ಮೆ ಭೇಷ್ ಅಂತಾರೆ.
ಕೊರೊನಾ ಲಾಕ್ಡೌನ್ ಹಿನ್ನೆಲೆ ಶಾಲೆಯ ಪಾಠ ಮೊಬೈಲ್ನಲ್ಲಿ ಸೆರೆಯಾಗಬೇಕಾಯಿತು. ಕರೆಗಳು ಬಂದಾಗಲೇ ನೆಟ್‌ವರ್ಕ್‌ಗಾಗಿ ಒದ್ದಾಡುವ ಹಳ್ಳಿ ಜನ ತಮ್ಮ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಲು ಪರದಾಡುತ್ತಿರುವ ಪರಿ ಹೇಳತೀರದು. ಸದ್ಯ ಪಾಠ ಕೇಳಲು ಮೊಬೈಲ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳ ಅತಿಯಾದ ಬಳಕೆಯು ಹೊಸ ಶ್ರೇಣಿಯ ಸಮಸ್ಯೆಗಳನ್ನು ತೆರೆದಿಡುತ್ತಿದೆ. ಬಡ ವಿದ್ಯಾರ್ಥಿಗಳಿಗಂತೂ ಆನ್‌ಲೈನ್ ಶಿಕ್ಷಣವು ಸಾಕಷ್ಟು ಸಮಸ್ಯೆ ತಂದೊಡ್ಡಿದೆ.
ಇಂಟರ್ನೆಟ್ ಲಭ್ಯತೆಯ ಕೊರತೆಯಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಸೇರಲು ವಿಫಲರಾಗಿದ್ದಾರೆ. ಮೊಹ್ಮದ್ ಆಫಮ್ ಎಂಬ ವಿದ್ಯಾರ್ಥಿ ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಗಂಡೀದ್ ವಲಯದ ಶೇಕ್‌ಪಲ್ಲಿ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಮಹಮೂದ್ ಅವರ ಮನೆಯಲ್ಲಿ ಕನಿಷ್ಟ ಪಕ್ಷ ಟಿವಿ ಕೂಡ ಇಲ್ಲ. ಆದರೂ ಮಗನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ಅವನ ಪೋಷಕರು ಸ್ಮಾರ್ಟ್ ಫೋನ್‌ನಲ್ಲಿ ಅವನಿಗೆ ಆನ್‌ಲೈನ್ ಶಿಕ್ಷಣ ಪಡೆಯಲು ಅನುವು ಮಾಡಿಕೊಟ್ಟಿದ್ಧಾರೆ.
ಆದರೆ, ಆನ್‌ಲೈನ್ ತರಗತಿಗೆ ಸೇರಲು ಅವನು ನೆಟ್‌ವರ್ಕ್‌ಗಾಗಿ ಗ್ರಾಮದ ಹೊರವಲಯಕ್ಕೆ ಹೋಗಬೇಕಾಗುತ್ತದೆ. ಹೀಗಾಗಿ, ಅವನ ಪೋಷಕರು ಅವನಿಗೆ ಆನ್‌ಲೈನ್ ತರಗತಿಗಳನ್ನು ಕೇಳಲು ಸಿಗ್ನಲ್ ಸಿಗುವ ಜಾಗದಲ್ಲಿ ಪುಟ್ಟ ಸೂರು ಕಟ್ಟಿ ವ್ಯವಸ್ಥೆ ಮಾಡಿದ್ದಾರೆ. ಸಮಸ್ಯೆಗಳು ಬಂದ್ರೂ ಬೇಧಿಸಿ ಮಗನ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಪೋಷಕರು ನಿಜಕ್ಕೂ ಶ್ಲಾಘನಾರ್ಹರು.