ತಿರುವನಂತಪುರಂ: ಎಎಸ್ಐ ವಿಲ್ಸನ್ ಹತ್ಯೆಯ ಆರೋಪಿಗಳು ತಿರುವನಂತಪುರಂನ ನಯತಿಂಕರದಲ್ಲಿ ಕೊಲೆಗೆ ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಕೊಲೆಗೂ ಮುನ್ನ ನಯತಿಂಕಾರದಲ್ಲಿ ವಾಸಿಸುತ್ತಿದ್ದರು ಎಂಬ ಸ್ಫೋಟಕ ಸಾಕ್ಷ್ಯವೂ ಪೊಲೀಸರಿಗೆ ಲಭಿಸಿದೆ.
ವಿಥುರಾ ನಿವಾಸಿ ಸಯೀದ್ ಅಲಿ ಆರೋಪಿಗಳಿಗೆ ಈ ಮನೆಯನ್ನು ವ್ಯವಸ್ಥೆ ಮಾಡಿದ್ದರು. ಆದರೆ ಅವರೀಗ ಪರಾರಿಯಾಗಿದ್ದಾರೆ. ಜ. 7 ಮತ್ತು 8 ರಂದು ನಯತಿಂಕರದಲ್ಲಿ ಆರೋಪಿಗಳ ಇದ್ದರು ಎಂಬ ಮಾಹಿತಿಯನ್ನು ಪೊಲೀಸರು ಖಚಿತಪಡಿಸಿದ್ದಾರೆ. ಈ ನಡುವೆ ಕೇರಳ-ತಮಿಳುನಾಡು ಪೊಲೀಸರು ನಿನ್ನೆ ನಗರದ ದೇಗುಲ ಪರಿಶೀಲಿಸಿದ ವೇಳೆ, ಆರೋಪಿಗಳು ಇಲ್ಲೇ ಇದ್ದರು ಎಂಬ ಸಾಕ್ಷಿ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಗಳು ಲಭ್ಯವಾಗಿವೆ. ಇದೇ ವೇಳೆ ಆರೋಪಿಗಳು ವಾಸಿಸುತ್ತಿದ್ದ ಮನೆಯಿಂದ ಪೊಲೀಸರು ಕೆಲವು ಹಾರ್ಡ್‌ಡಿಸ್ಕ್ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಆರಕ್ಷಕರು ಮುಖ್ಯ ಆರೋಪಿ ಅಬ್ದುಲ್ ಹಮೀಮ್ ಮತ್ತು ತೌಫೀಕ್ ಜೊತೆ ಸಂಪರ್ಕ ಹೊಂದಿರುವ ಅನುಮಾನದ ಮೇರೆಗೆ ಇನ್ನುಳಿದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಸಿಸಿಟಿವಿ ದೃಶ್ಯಾವಳಿಯಲ್ಲಿ ಮುಖ್ಯ ಆರೋಪಿಗಳು ನಯಟ್ಟಿಂಕರ ಪಟ್ಟಣದ ಮೂಲಕ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು, ಕಪ್ಪು ಚೀಲದೊಂದಿಗೆ ಆಟೋದಲ್ಲಿ ಬಂದಿರುವುದು ದೃಶ್ಯಾವಳಿಗಳಲ್ಲಿ ದಾಖಲಾಗಿದೆ.