ಗಾಜಿಯಾಬಾದ್ (ಉತ್ತರ ಪ್ರದೇಶ): ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿರಿಸಲು ಉತ್ತರ ಪ್ರದೇಶ ಪೊಲೀಸರು ಡ್ರೋನ್ ಕ್ಯಾಮೆರಾ ಮೊರೆ ಹೋಗಿದ್ದು, ಮನೆ ಮಾಳಿಗೆ ಮೇಲೆ ಗುಂಪಾಗಿ ಜೂಜಾಡುತ್ತಿದ್ದವರು ಪೊಲೀಸರ ಡ್ರೋನ್ ಕ್ಯಾಮೆರಾಗೆ ಸಿಕ್ಕಿಬಿದ್ದಿದ್ದಾರೆ.
ಗಾಜಿಯಾಬಾದ್ನ ಖೋಡಾ ಪ್ರದೇಶದ ಮನೆಯೊಂದರ ಮಾಳಿಗೆ ಮೇಲೆ ಜೂಜುಕೋರರ ಗುಂಪೊಂದು ಜೂಜಾಟದಲ್ಲಿ ಮೈಮರೆತಿತ್ತು. ಆದರೆ ಆಕಾಶ ಮಾರ್ಗದಲ್ಲಿ ಬಂದ ಡ್ರೋನ್ ಇವರ ಕರಾಮತ್ತನ್ನು ಕ್ಷಣಾರ್ಧದಲ್ಲಿ ಬಹಿರಂಗಪಡಿಸಿತು. ಡ್ರೋನ್ ನೋಡುತ್ತಲೇ ದಿಕ್ಕಾಪಾಲಾಗಿ ಕೆಲವರು ಓಡಿ ಹೋದರಾದರೂ, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಾಳಿಗೆ ಮೇಲಿದ್ದ 8 ಜನ ಜೂಜುಕೋರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಲಾಕ್ಡೌನ್ ಇದ್ದಾಗಲೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗುವವರು ಇದರಿಂದ ಪಾಠ ಕಲಿಯುವುದು ಒಳಿತು. ಡ್ರೋನ್ನ ಹದ್ದಿನ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಸಾಬೀತಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಡ್ರೋನ್ ಕ್ಯಾಮೆರಾ ಪೊಲೀಸರಿಗೆ ವರದಾನವಾಗಿ ಪರಿಣಮಿಸಿವೆ. ಗಾಜಿಯಾಬಾದ್ನ ಶಹೀದ್ ನಗರದಲ್ಲಿ ತಲೆಮರೆಸಿಕೊಂಡಿದ್ದ 10 ಜನ ಇಂಡೊನೇಶಿಯಾ ನಾಗರಿಕರನ್ನು ಡ್ರೋನ್ ಸಹಾಯದಿಂದಲೇ ಬಂಧಿಸಲಾಗಿತ್ತು.