ನವದೆಹಲಿ : ಪೂರ್ವ ಲಡಾಖ್ ಗಡಿಯಲ್ಲಿ ನಡೆದಿದ್ದ ಘರ್ಷಣೆ ಸಂಬಂಧ ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುವ ನಿರ್ಧಾರಕ್ಕೆ ಬಹುತೇಕ ಪಕ್ಷಗಳು ಬೆಂಬಲ ಸೂಚಿಸಿವೆ. ಆದರೆ, ಕೆಲವೊಂದಷ್ಟು ಸಲಹೆ-ಸೂಚನೆಗಳನ್ನು ನೀಡಿವೆ.
ಸ್ಥಳದಲ್ಲಿನ ಪರಿಸ್ಥಿತಿ ತಹಬದಿಗೆ ಬಂದಿರುವ ಬಗ್ಗೆ ದೇಶಕ್ಕೆ ಭರವಸೆ ನೀಡುವ ಅವಶ್ಯಕತೆ ಇದೆ. ಹೀಗಾಗಿ ಪರ್ವತ ಶ್ರೇಣಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹೇಗಿದೆ ಎಂಬುದನ್ನು ನಿರಂತರವಾಗಿ ವಿಪಕ್ಷಗಳಿಗೆ ತಿಳಿಸಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆಯಲ್ಲಿ ಪ್ರಧಾನಿ ಅವರನ್ನು ಕೋರಿರುವುದಾಗಿ ಮೂಲಗಳು ತಿಳಿಸಿವೆ.
ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ನಿರ್ಧಾರಗಳಿಂದ ಚೀನಾ ಆಕ್ರೋಶಗೊಂಡಿದೆ. ಹೀಗಾಗಿ ಅಲ್ಲಿನ ಅಭಿವೃದ್ಧಿ ಸಹಿಸಲಾರದೆ ಗಡಿಯಲ್ಲಿ ಗಲಾಟೆ ಮಾಡುತ್ತಿದೆ. ಇಂದಿನ ಸಭೆಯಲ್ಲಿ ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತಕ್ಕೆ ಕರೆ ನೀಡಿದ್ದಾರೆ ಎಂದು ತೆಲಂಗಾಣ ಸಿಎಂ ಕೆ ಸಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಡಿಎಂಕೆ ಪಕ್ಷದ ನಾಯಕ ಎಂ ಕೆ ಸ್ಟಾಲಿನ್ ಮಾತನಾಡಿ, ದೇಶ ಭಕ್ತಿಯ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಚೀನಾ ಕುರಿತ ಪ್ರಧಾನಿ ಮೋದಿ ಅವರ ಇತ್ತೀಚಿನ ಹೇಳಿಕೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಭಾರತ ಶಾಂತಿಪ್ರಿಯ ದೇಶ. ಆದರೆ, ನಮ್ಮನ್ನು ಕೆಣಕಿದ್ರೆ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ಚೀನಾಗೆ ನೀಡಿದ್ದರು.
ಸೈನಿಕರು ಶಸ್ತ್ರಾಸ್ತ್ರಗಳೊಂದಿಗೆ ಹೋಗಿದ್ರೇ ಅಥವಾ ಇಲ್ಲವೇ ಎಂಬುದನ್ನು ಅಂತಾರಾಷ್ಟ್ರೀಯ ಒಪ್ಪಂದಗಳು ನಿರ್ಧಾರ ಮಾಡುತ್ತವೆ. ಕೆಲ ಸೂಕ್ಷ್ಮ ವಿಚಾರಗಳಿಗೆ ಗೌರವ ನೀಡಬೇಕು ಎಂದು ಎನ್‌ಸಿಪಿ ನಾಯಕ, ಮಾಜಿ ರಕ್ಷಣಾ ಸಚಿವ ಶರದ್ ಪವಾರ್ ತಿಳಿಸಿದ್ದಾರೆ. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಮತ್ತು ಸಿಕ್ಕಿಂ ಸಿಎಂ ಪ್ರೇಮ್ ಸಿಂಗ್, ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ಪ್ರಧಾನಿ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಬಿಹಾರ ಸಿಎಂ ನಿತೀಶ್‌ಕುಮಾರ್ ಸೇರಿ ಬಹುತೇಕ ಪಕ್ಷಗಳ ಮುಖ್ಯಸ್ಥರು ಭಾಗವಹಿಸಿದ್ದರು.